ADVERTISEMENT

ಮಗನ ಬಲಿ ಕೊಟ್ಟ ಸಿದ್ದರಾಮಯ್ಯ: ಶ್ರೀನಿವಾಸ ಪ್ರಸಾದ್ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST

ನಂಜನಗೂಡು: ‘ಪುತ್ರನ ಮೇಲೆ ಕಾಳಜಿಯಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿವಳಿಕೆ ನೀಡಿ ಪ್ರವಾಸ ಹೋಗದಂತೆ ತಡೆಯದೆ ಬಲಿಕೊಟ್ಟ. ಇದು ಕೈಯಾರೆ ಕೊಲೆ ಮಾಡಿದ ಹಾಗೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಆರೋಪಿಸಿದರು.

ತಾಲ್ಲೂಕಿನ ಸುತ್ತೂರಿನಲ್ಲಿ ಮಂಗಳವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ವರುಣಾ ಕ್ಷೇತ್ರಕ್ಕಷ್ಟೇ ಸೀಮಿತರಾಗಿದ್ದ ಪುತ್ರ ರಾಕೇಶ್‌ನನ್ನು ವ್ಯವಹಾರ ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ ಬೆಂಗಳೂರಿಗೆ ಕರೆ ತಂದರು. ಅಲ್ಲಿನ ಕೆಲವು ಕೆಟ್ಟ ಹವ್ಯಾಸಗಳಿಂದ ಆರೋಗ್ಯ ಕೆಟ್ಟಿತು. ಬೆಲ್ಜಿಯಂಗೆ ಹೋದದ್ದು ಗಾಂಜಾ, ಮಾದಕ ದ್ರವ್ಯ, ಮದ್ಯಸೇವನೆ ಶೋಕಿಗಾಗಿ’ ಎಂದು ಹೇಳಿದರು.

ADVERTISEMENT

‘ರಾಕೇಶ್ ಮೃತಪಟ್ಟ ನಂತರ ಅಪ್ಪನ ಮುಖವನ್ನೇ ನೋಡಲು ಇಷ್ಟಪಡದ, ಪ್ರತ್ಯೇಕವಾಗಿ ವಾಸಿಸುತ್ತಿದ್ದ ಡಾ.ಯತೀಂದ್ರ ಅವರನ್ನು ಅಧಿಕಾರದ ಹಪಾಹಪಿಗಾಗಿ ವರುಣಾ ಕ್ಷೇತ್ರದಲ್ಲಿ ತಂದು ಪ್ರತಿಷ್ಠಾಪಿಸಿದರು’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಅಡಳಿತದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರಿಗೆ ಮರೀಗೌಡ ಅವಮಾನ ಮಾಡಿದ. ದೂರು ನೀಡಲು ಹೋದರೆ ಪೊಲೀಸರು ಸ್ವೀಕರಿಸಲಿಲ್ಲ. ಇವರ ಆಪ್ತ ಡಾ.ಎಚ್.ಸಿ.ಮಹದೇವಪ್ಪ ಮಗ ಮರಳು ಲೂಟಿ ಮಾಡಿ ವಿಚಾರಣೆ ಎದುರಿಸುತ್ತಿದ್ದಾನೆ. ಕತ್ತೆ ದುಡಿದ ಹಾಗೆ ದುಡಿದಿದ್ದೇನೆ ಎಂದು ಹೇಳುವ ಮಹದೇವಪ್ಪ, ಸ್ವಂತಕ್ಕೆ ಎಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಕೇಳಿ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.