ADVERTISEMENT

ಜೈಲಿನಿಂದಲೇ ₹15 ಲಕ್ಷ ವಸೂಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:41 IST
Last Updated 23 ಜನವರಿ 2018, 19:41 IST

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯ ಮೇಲೆ ಹಲ್ಲೆ ಮಾಡುವ ಮೂಲಕ ಸಹ ಕೈದಿಗಳು ₹15 ಲಕ್ಷ ವಸೂಲಿ ಮಾಡಿರುವ ಪ್ರಕರಣ ಬರ್ಕೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಸಿರಿನ್‌ ಮಧುಸೂದನ್‌ ಹಣ ಕಳೆದುಕೊಂಡಿರುವ ವಿಚಾರಣಾಧೀನ ಕೈದಿ. ಸಹ ಕೈದಿಗಳಾದ ತಿಲಕ್‌, ಶಿವು, ಮಿಥುನ್‌, ನಿಖಿಲ್‌, ರಾಜು, ಚರಣ್‌ ಸೇರಿದಂತೆ 8 ಜನರ ತಂಡ ಈ ಕೃತ್ಯ ಎಸಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೆಆರ್‌ಐಡಿಎಲ್‌ಗೆ ಸೇರಿದ ₹55 ಕೋಟಿಯನ್ನು ಐಒಬಿ ಬ್ಯಾಂಕಿನ ಸುರತ್ಕಲ್‌ ಕುಳಾಯಿ ಶಾಖೆಯ ಖಾತೆಯಿಂದ ಅಕ್ರಮ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಖೆಯ ಪ್ರಬಂಧಕ ಸಿರಿನ್‌ ಮಧುಸೂದನ್‌ ಬಂಧನವಾಗಿದ್ದು, ಈಗ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ADVERTISEMENT

ಸಿರಿನ್‌ ಇರುವ ಸೆಲ್‌ನಲ್ಲಿಯೇ ಇರುವ ಕೋಡಿಕೆರೆ ಗ್ಯಾಂಗ್‌ನ ತಿಲಕ್‌ ಹಾಗೂ ಆತನ ತಂಡದವರು ಹಣಕ್ಕಾಗಿ ಸಿರಿನ್‌ಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ನಿರಾಕರಿಸಿದಾಗ ಆತನಿಗೆ ದೈಹಿಕವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಕೆಆರ್‌ಐಡಿಎಲ್‌ ಸಂಸ್ಥೆಗೆ ವಂಚಿಸಿದ ಹಣದಲ್ಲಿ ತಮಗೂ ಪಾಲು ನೀಡುವಂತೆ ಒತ್ತಾಯಿಸುತ್ತಲೇ ಇದ್ದರು.

ಜೈಲಿನಿಂದಲೇ ಫೋನ್‌ ಕರೆ: ನಿರಂತರವಾಗಿ ಮಾನಸಿಕ, ದೈಹಿಕ ಹಲ್ಲೆ ನೀಡಿದ ಆರೋಪಿಗಳು, ಸಿರಿನ್‌ ಪಾಲಕರಿಗೆ ಕರೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪದೇ ಇದ್ದಾಗ ಜೈಲಿನಲ್ಲಿಯೇ ರ‍್ಯಾಗಿಂಗ್‌ ಆರಂಭಿಸಿದರು.

ನಿತ್ಯದ ಕಿರುಕುಳದಿಂದ ಬೇಸತ್ತ ಸಿರಿನ್ ಮಧುಸೂದನ್‌, ಜೈಲಿನ ಒಳಗಿಂದಲೇ ಮೊಬೈಲ್‌ ಮೂಲಕ ಪೋಷಕರಿಗೆ ಕರೆ ಮಾಡಿ ಹಣ ಕೊಡುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಅದರಂತೆ 3 ಕಂತಿನಲ್ಲಿ ಒಟ್ಟು ₹15 ಲಕ್ಷ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿರಿನ್‌ ಪೋಷಕರು ಬರ್ಕೆ ಠಾಣೆಗೆ ದೂರು ನೀಡಿದ್ದು,
ಪ್ರಕರಣ ದಾಖಲಿಸಿಕೊಂಡು, ಮೊಬೈಲ್‌ ಕರೆ ಮಾಡಿರುವುದುಹಾಗೂ ಹಣವನ್ನು ಹೇಗೆ ತಲುಪಿಸಲಾಯಿತು ಎಂಬುದರಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಬರ್ಕೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.