ADVERTISEMENT

ಮಹದಾಯಿಗಾಗಿ ‘ಕರ್ನಾಟಕ ಬಂದ್‌’ ಇಂದು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹದಾಯಿ ಯೋಜನೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಗುರುವಾರ ‘ಕರ್ನಾಟಕ ಬಂದ್‌’ಗೆ ಕರೆ ನೀಡಿದೆ.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಡೆಯುವ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ಸೂಚಿಸಿವೆ. ಕೆಲವು ಸಂಘಟನೆಗಳು ಪರೋಕ್ಷ ಬೆಂಬಲವನ್ನಷ್ಟೇ ನೀಡಿವೆ.

ರಾಜಧಾನಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂದ್‌ ಬಿಸಿ ಹೆಚ್ಚು ಇರುವ ನಿರೀಕ್ಷೆ ಇದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಯ ಬಸ್‌ಗಳು ಎಂದಿನಂತೆ ರಸ್ತೆಗೆ ಇಳಿಯಲಿವೆ. ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್‌ ಹೇಳಿದ್ದಾರೆ.

ADVERTISEMENT

ಮಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಬೆಂಬಲ ಸೂಚಿಸಿಲ್ಲ. ಮೈಸೂರಿನಲ್ಲಿ ರಜೆ ಇಲ್ಲ. ಪರೀಕ್ಷೆಗಳನ್ನು ಮಾತ್ರ ಮುಂದೂಡಲಾಗಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸರ್ಕಾರಿ ಶಾಲಾ–ಕಾಲೇಜುಗಳಿಗೆ ರಜೆ ನೀಡಿಲ್ಲ. ಕೆಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ.

ದಿನಪತ್ರಿಕೆ, ಹಾಲು ಸೇರಿದಂತೆ ದಿನ ಬಳಕೆ ವಸ್ತುಗಳ ಪೂರೈಕೆ ಎಂದಿನಂತೆ ಇರಲಿದೆ. 'ವೈದ್ಯಕೀಯ ಸೇವೆಯೂ ಲಭ್ಯವಿರಲಿದೆ' ಎಂದು ಭಾರತೀಯ ವೈದ್ಯಕೀಯ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಎನ್‌. ರವೀಂದ್ರ ಹೇಳಿದ್ದಾರೆ.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮಾರುಕಟ್ಟೆಗಳ ವ್ಯಾಪಾರಿಗಳ ಸಂಘಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಬೆಂಗಳೂರಿನಲ್ಲಿ ಹೋಟೆಲ್‌ಗಳು ತೆರೆಯಲಿವೆ’ ಎಂದು ಹೋಟೆಲ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್‌ ತಿಳಿಸಿದ್ದಾರೆ.

ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್, ‘ಪೆಟ್ರೋಲ್‌ ಬಂಕ್‌ಗಳು ತೆರೆದಿರಲಿವೆ. ಈ ಬಂದ್‌ಗೆ ಪರೋಕ್ಷ ಬೆಂಬಲ ಮಾತ್ರ ನೀಡಿದ್ದೇವೆ’ ಎಂದರು.

‘ಪ್ರವಾಸಿ ಟ್ಯಾಕ್ಸಿಗಳು ಎಂದಿನಂತೆ ಓಡಾಡಲಿವೆ. ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಚಾಲಕರು ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ಮಾಡಲಿದ್ದಾರೆ’ ಎಂದು ಪ್ರವಾಸಿ ಟ್ಯಾಕ್ಸಿಗಳ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದರು.

ಓಲಾ, ಉಬರ್‌ ಮಾಲೀಕರು ಹಾಗೂ ಚಾಲಕರ ಸಂಘದ ಮುಖಂಡ ತನ್ವೀರ್‌ ಸೇಠ್‌, ‘ಮೊಬೈಲ್‌ ಆ್ಯಪ್‌ ಆಧರಿತ ಕಂಪನಿಗಳ ಟ್ಯಾಕ್ಸಿಗಳು ಎಂದಿನಂತೆ ಸಂಚರಿಸಲಿವೆ’ ಎಂದರು.

ರಾಜ್ಯದ ಪಿ.ಯು ಕಾಲೇಜುಗಲ್ಲಿ ಗುರುವಾರ ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆಗಳನ್ನು ಜ. 25ಕ್ಕೆ ಮುಂದೂಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯು ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಗುರುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಫೆ. 5ಕ್ಕೆ ಮುಂದೂಡಲಾಗಿದೆ. ಬೆಂಗಳೂರಿನ ಕೆಲವು ಐಟಿ ಕಂಪನಿಗಳು ತನ್ನ ನೌಕರರಿಗೆ ರಜೆ ಘೋಷಣೆ ಮಾಡಿವೆ.

120 ಮಂದಿ ವಶಕ್ಕೆ: ಬಂದ್‌ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ 120 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‌ ಪಂತ್, ‘ಪ್ರತಿ ತಾಲ್ಲೂಕಿನಲ್ಲೂ ಪ್ರತಿಭಟನೆಗಾಗಿ ನಿರ್ದಿಷ್ಟ ಸ್ಥಳ ಮೀಸಲಿರಿಸಿದ್ದೇವೆ. ಸಂಘಟನೆಗಳ ಮುಖಂಡರ ಸಭೆ ನಡೆಸಿ ಕೆಲ ನಿಯಮಗಳನ್ನು ಪಾಲಿಸುವಂತೆ ಹೇಳಿದ್ದೇವೆ’ ಎಂದರು.

‘ಮಹದಾಯಿ ಹೋರಾಟ ಕಾವು ಹೆಚ್ಚಿರುವ ಗದಗ ಜಿಲ್ಲೆಯ ನರಗುಂದ ಹಾಗೂ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣಗಳಲ್ಲಿ  ಹೆಚ್ಚಿನ ಭದ್ರತೆ ಕೈಗೊಳ್ಳಲಿದ್ದೇವೆ. ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಧಾರವಾಡ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದಾರೆ’ ಎಂದರು.

‘ಭರವಸೆ ಕೊಟ್ಟರೆ ಬಂದ್ ವಾಪಸ್’: ‘ರಾಜ್ಯದ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಮನವೊಲಿಸಿ ವಿವಾದ ಇತ್ಯರ್ಥ ಪಡಿಸುವ ಬಗ್ಗೆ ಲಿಖಿತ ರೂಪದ ಭರವಸೆ ನೀಡಿದರೆ ಬಂದ್ ಹಿಂಪಡೆಯುತ್ತೇವೆ’ ಎಂದು ವಾಟಾಳ್ ನಾಗರಾಜ್ ಹೇಳಿದರು.

‘ನಗರದಲ್ಲಿ ಫೆ.4ರಂದು ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಅಷ್ಟರೊಳಗೆ ಭರವಸೆ ನೀಡದಿದ್ದರೆ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ಈ ಸಲುವಾಗಿ ಉತ್ತರಕರ್ನಾಟಕದಿಂದ ಸಾವಿರಾರು ರೈತರು ನಗರಕ್ಕೆ ಬರುತ್ತಿದ್ದಾರೆ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ್‌ಗೆ ಬೆಂಬಲ ನೀಡಿದ್ದಾರೆ. ನೈತಿಕವಾಗಿ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು. ಬಂದ್‌ನಿಂದ ಹಿಂದೆ ಸರಿದು ಕನ್ನಡಿಗರು ಹಾಗೂ ರೈತರಿಂದ ಯಾರೂ ದೂರ ಸರಿಯಬಾರದು. ಇದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.

ಗೋವಾ ಬಸ್‌ ಸಂಚಾರ ರದ್ದುಗೊಳಿಸಲು ಮನವಿ: ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದಂದು ಗೋವಾದ ಸಾರಿಗೆ ಸಂಸ್ಥೆಯ ಬಸ್‌ಗಳ ಕರ್ನಾಟಕ ಸಂಚಾರವನ್ನು ರದ್ದು ಮಾಡಬೇಕು ಎಂದು ವಾಯವ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ, ಆ ರಾಜ್ಯದ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ತಿಳಿಸಿದ್ದಾರೆ.

**

ಬಂದ್ ವೇಳೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಶಾಂತಿ ಕದಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. 30 ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಇರಲಿದೆ.
– ರಾಮಲಿಂಗಾರೆಡ್ಡಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.