ADVERTISEMENT

ರಾಜಧಾನಿ, ಮುಂಬೈ ಕರ್ನಾಟಕದಲ್ಲಿ ಬಂದ್‌ಗೆ ಜನಬೆಂಬಲ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಕರ್ನಾಟಕ ಬಂದ್‌ನಿಂದಾಗಿ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ ಬಿಕೋ ಎನ್ನುತ್ತಿತ್ತು. - ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಕರ್ನಾಟಕ ಬಂದ್‌ನಿಂದಾಗಿ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ ಬಿಕೋ ಎನ್ನುತ್ತಿತ್ತು. - ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ಮಹದಾಯಿ ಯೋಜನೆ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಗುರುವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ಗೆ ರಾಜಧಾನಿ ಮತ್ತು ಮುಂಬೈ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕಾವೇರಿ ಕಣಿವೆಯಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದರೆ, ಕರಾವಳಿ, ಮಲೆನಾಡು ಹಾಗೂ ಕಲುಬುರ್ಗಿ ಭಾಗದಲ್ಲಿ ಜನರು ನೀರಸ ಪ್ರತಿಕ್ರಿಯೆ ತೋರಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಜನರಿಗೆ ಬಂದ್‌ ಬಿಸಿ ತಟ್ಟಲಾರಂಭಿಸಿತು. ಜನಜೀವನವೂ ಭಾಗಶಃ ಅಸ್ತವ್ಯಸ್ತವಾಗಿತ್ತು.

ADVERTISEMENT

ಕನ್ನಡ ಸಂಘಟನೆಗಳ ಕಾರ್ಯಕರ್ತರು ಪುರಭವನ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಅವೆನ್ಯೂ ರಸ್ತೆಯಲ್ಲಿ ದಿನಸಿ ಅಂಗಡಿಗೆ, ಮಲ್ಲೇಶ್ವರದ ಒಂದು ಹೋಟೆಲ್‌ಗೆ ಮತ್ತು ಒಂದು ಬೇಕರಿಗೆ ಪ್ರತಿಭಟನಾಕಾರರು ಕಲ್ಲು ತೂರಿದರು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಲಾರಿಗಳು ರಸ್ತೆಗಿಳಿಯಲಿಲ್ಲ. ಆಟೊ ಸಂಚಾರವೂ ವಿರಳವಾಗಿತ್ತು. ಮೆಟ್ರೊ ರೈಲು ಸಂಚಾರ ಮಾತ್ರ ಎಂದಿನಂತೆ ಇತ್ತು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ರಾಜಧಾನಿಯಲ್ಲಿ ಶಾಲಾ, ಕಾಲೇಜು, ಚಿತ್ರಮಂದಿರ, ಶಾಪಿಂಗ್‌ ಮಾಲ್‌, ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು, ಅಂಗಡಿಗಳು, ಪ್ರಮುಖ ಮಾರುಕಟ್ಟೆಗಳು ಬಹುತೇಕ ಬಂದ್‌ ಆಗಿದ್ದವು.

ಯಾದಗಿರಿಯಲ್ಲಿ ಪ್ರತಿಭಟನಾಕಾರರು ಉದ್ಯಾನ ಎಕ್ಸ್‌ಪ್ರೆಸ್‌ ರೈಲಿಗೆ ತಡೆಯೊಡ್ಡಿದರು. ಇದರಿಂದಾಗಿ ರೈಲು 18 ಸೆಕೆಂಡ್ ವಿಳಂಬವಾಗಿ ಚಲಿಸಿತು. ಚಿತ್ರದುರ್ಗ ಮತ್ತು ಮಂಗಳೂರಿನಲ್ಲೂ ಸಾಂಕೇತಿಕವಾಗಿ ರೈಲು ತಡೆದು ಪ್ರತಿಭಟಿಸಿದರು.

ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ, ಗದಗ, ರಾಯಚೂರು ಮತ್ತು ಕೊಪ್ಪಳದಲ್ಲಿ ರೈಲು ತಡೆಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್‌ ಬಂಕ್‌ಗಳು ಬಂದ್ ಆಗಿದ್ದವು. ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧೆಡೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.

ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಕಳಸಾ– ಬಂಡೂರಿ ಹೋರಾಟ ಸಮಿತಿಯವರು ಸೇರಿದಂತೆ ವಿವಿಧ ಸಂಘಟನೆಗಳು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಪ್ರತಿಭಟಿಸಿದರು.

ದಾವಣಗೆರೆಯ ಜಯದೇವ ವೃತ್ತದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನೋಹರ್ ಪರ್ರೀಕರ್‌ ಮತ್ತು ಗೋವಾ ಸಚಿವ ವಿನೋದ ಪಾಲ್ಯೇಕರ್‌ ಅವರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹನ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಮಾಜಾಳಿ ಸಮೀಪದ ಗೋವಾ ಚೆಕ್‌ ಪೋಸ್ಟ್‌ ಬಳಿ ಕರವೇ ಕಾರ್ಯಕರ್ತರು ಗೋವಾ ಮುಖ್ಯಮಂತ್ರಿಯ ಪ್ರತಿಕೃತಿ ದಹಿಸಿದರು.

ಹಾಲು, ತರಕಾರಿ ಸಾಗಿಸುತ್ತಿದ್ದ ವಾಹನಗಳನ್ನು ಬೆಳಗಾವಿ ತಾಲ್ಲೂಕಿನ ಪೀರನವಾಡಿ ಬಳಿ ಕೆಲಕಾಲ ಪ್ರತಿಭಟನಾಕಾರರು ತಡೆದಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ವಾಹನಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟರು. ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವಿನ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಕಾವೇರಿ ಕಣಿವೆಯ ಐದು ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರು ನಗರದಲ್ಲಿ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ನಗರದ ಹೃದಯ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಮಧ್ಯಾಹ್ನದ ಬಳಿಕ ಕೆಲ ಅಂಗಡಿಗಳು ಬಾಗಿಲು ತೆರೆದವು.

ಮಂಡ್ಯದಲ್ಲಿ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತ್ರ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಹಾಸನದಲ್ಲಿ ಶಾಲಾ, ಕಾಲೇಜುಗಳು ಬಾಗಿಲು ತೆರೆದಿದ್ದವು. ಕೊಡಗು ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಆದರೆ, ವಾಣಿಜ್ಯ ವಾಹಿವಾಟು ಎಂದಿನಂತಿತ್ತು.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ‘ಕರ್ನಾಟಕ ಬಂದ್‌’ಗೆ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಜನಜೀವನ ಎಂದಿನಂತೆಯೇ ಇತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹೊರತುಪಡಿಸಿ ಇತರೆ ವಾಹನಗಳ ಸಂಚಾರ ಎಂದಿನಂತೆ ಇತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವೆಡೆ ಸಾಂಕೇತಿಕ ಪ್ರತಿಭಟನೆ ನಡೆದವು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂದ್‌ ನಡೆಯಲಿಲ್ಲ.

ಎಲ್ಲೆಲ್ಲಿ ಹೇಗಿತ್ತು ಪ್ರತಿಕ್ರಿಯೆ

ಬಂದ್‌ಗೆ ಉತ್ತಮ ಸ್ಪಂದನೆ: ಬೆಂಗಳೂರು, ಧಾರವಾಡ, ಗದಗ ಜಿಲ್ಲೆಗಳಲ್ಲಿ ಹಾಗೂ ಬೆಳಗಾವಿ

ಎಲ್ಲಿ ಮಿಶ್ರ: ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ

ಎಲ್ಲಿ ನೀರಸ:  ಬಳ್ಳಾರಿ, ವಿಜಯಪುರ, ಕಲುಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ

ಬಂದ್‌ ನಡೆಯಲಿಲ್ಲ: ದಕ್ಷಿಣ ಕನ್ನಡ ಮತ್ತು ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.