ADVERTISEMENT

ಮಹದಾಯಿ ವಿವಾದ; ಸರ್ವಪಕ್ಷ ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಮಹದಾಯಿ ವಿವಾದ; ಸರ್ವಪಕ್ಷ ಸಭೆ ವಿಫಲ
ಮಹದಾಯಿ ವಿವಾದ; ಸರ್ವಪಕ್ಷ ಸಭೆ ವಿಫಲ   

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಚರ್ಚಿಸಲು ಶನಿವಾರ ಸೇರಿದ್ದ ಸರ್ವಪಕ್ಷಗಳ ನಾಯಕರು ಮತ್ತು ರೈತ ಹೋರಾಟಗಾರರ ಸಭೆ ಪರಸ್ಪರ ಆರೋಪ– ಪ್ರತ್ಯಾರೋಪ, ಮಾತಿನಜಟಾಪಟಿ ಪರಿಣಾಮವಾಗಿ ಯಾವುದೇ ತೀರ್ಮಾನ ಕೈಗೊಳ್ಳಲು ವಿಫಲವಾಯಿತು.

‘ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸದ ಹೊರತು ವಿವಾದ ಬಗೆಹರಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು. ‘ಮೊದಲು ಗೋವಾ ಮುಖ್ಯಮಂತ್ರಿ ಸಭೆ ಕರೆಯಲಿ, ಆಮೇಲೆ ಅಲ್ಲಿನ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದರಿಂದ ತೃಪ್ತರಾಗದ ಬಿಜೆಪಿ ಮುಖಂಡರು ಸಭೆಯ ಮಧ್ಯದಲ್ಲೇ ಹೊರ ನಡೆದರು.

‘ಈ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು’ ಎಂದು ಜೆಡಿಎಸ್‌ ಶಾಸಕ ಎನ್‌.ಎಚ್‌. ಕೋನರಡ್ಡಿ ಆಗ್ರಹಿಸಿದರು. ಅದಕ್ಕೆ ಕಾಂಗ್ರೆಸ್ ಬೆಂಬಲವ್ಯಕ್ತಪಡಿಸಿತು. ಇದನ್ನು ವಿರೋಧಿಸಿದ ಬಿಜೆಪಿ ಮುಖಂಡರು, ‘ಗೋವಾ ಕಾಂಗ್ರೆಸ್ಸಿಗರ ಜತೆ ಮಾತುಕತೆ ನಡೆಸುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಜತೆ ಮಾತುಕತೆ ನಡೆಸಿದ್ದರಿಂದ ಅವರು ಬಿ.ಎಸ್‌. ಯಡಿಯೂರಪ್ಪಗೆ ಪತ್ರ ಬರೆದು ವಿವಾದ ಬಗೆಹರಿಸಿಕೊಳ್ಳಲು ಸಿದ್ಧವೆಂದು ಭರವಸೆ ನೀಡಿದ್ದರು’ ಎಂದರು.

ADVERTISEMENT

‘ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ಸೂಚನೆ ನೀಡಿದೆ. ಅಂತರರಾಜ್ಯ ವಿವಾದವಾಗಿರುವುದಿಂದ ಪ್ರಧಾನಿ ಹೊರತುಪಡಿಸಿ ಬೇರೆ ಯಾರೇ ಮಧ್ಯಪ್ರವೇಶಿಸಿದರೂ ಪ್ರಯೋಜನ ಇಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಕೇಂದ್ರ ಸರ್ಕಾರದ ಸಾಲಿಸಿಟರ್‌ ಜನರಲ್‌ ಆತ್ಮರಾಮ್‌ ನಾಡಕರ್ಣಿ ಗೋವಾ ಪರ ವಾದ ಮಂಡಿಸುತ್ತಿದ್ದಾರೆ. ಆ ಮೂಲಕ ವಿಚಾರಣೆಯ ಮೇಲೆ ಕೇಂದ್ರ ಸರ್ಕಾರ ಪ್ರಭಾವ ಬೀರಲು ಯತ್ನಿಸುತ್ತಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ’ ಎಂದು ಕೋನರಡ್ಡಿ ಆರೋಪಿಸಿದರು.

ಆಗ ಕೇಂದ್ರ ಸಚಿವ ಸದಾನಂದಗೌಡ, ‘ನ್ಯಾಯಮಂಡಳಿಯಲ್ಲಿ ವಿವಾದದ ವಿಚಾರಣೆ ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಬೇಕು’ ಎಂದು ಸಲಹೆ ನೀಡಿದರು. ಸಭೆ ಮಧ್ಯದಲ್ಲೇ ಸದಾನಂದಗೌಡ ಮತ್ತು ಪ್ರಹ್ಲಾದ ಜೋಶಿ ಹೊರಹೋದರು.

‘ನಿಮಗೆ ರಾಜಕೀಯವೇ ಮುಖ್ಯವಾಗಿದೆ. ನೀರು ತರುವ ಪ್ರಯತ್ನ ಮಾಡಿ. ಪರಸ್ಪರ ಆರೋಪ ಮಾಡುವುದರಲ್ಲಿ ಕಾಲ ಕಳೆಯಬೇಡಿ. ನಮಗೆ ರಾಜಕೀಯ ಬೇಕಾಗಿಲ್ಲ’ ಎಂದು ರೈತ ಮುಖಂಡರು ಕೂಗಾಡಿದರು.

ಕೊಟ್ಟ ಮಾತಿಗೆ ಬಿಜೆಪಿಯವರು ತಪ್ಪಿದರು ಎಂದು ಆರೋಪಿಸಿ ಮಹದಾಯಿ ಹೋರಾಟಗಾರರರು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಮತ್ತು ಬಿಜೆಪಿ ಶಾಸಕರು ಶೆಟ್ಟರ್ ಬೆಂಬಲಕ್ಕೆ ನಿಂತರು.

ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಲು ಮುಂದಾದ ಮುಖ್ಯಮಂತ್ರಿ, ‘ಈವರೆಗೆ 16 ಬಾರಿ ಪತ್ರ ಬರೆದರೂ ಕೇಂದ್ರ ಹಾಗೂ ಗೋವಾ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಸೌಜನ್ಯಕ್ಕಾದರೂ ಪ್ರಧಾನಿ ಮತ್ತು ಗೋವಾ ಮುಖ್ಯಮಂತ್ರಿ ಉತ್ತರ ಬರೆದಿಲ್ಲ’ ಎಂದು ದೂರಿದರು.

ಆನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಮಹದಾಯಿ ವಿಚಾರದಲ್ಲಿ ಈವರೆಗೆ ಏನೇನಾಯಿತು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿಯವರು ಇದಕ್ಕೆ ಒಪ್ಪಲಿಲ್ಲ’ ಎಂದರು.

‘ಗೋವಾ ಕಾಂಗ್ರೆಸ್‌ನವರನ್ನು ಒಪ್ಪಿಸುವಂತೆ ಬಿಜೆಪಿ ನಾಯಕರು ಪದೇ ಪದೇ ಆಗ್ರಹಿಸುತ್ತಿದ್ದಾರೆ. ಗೋವಾ ಮುಖ್ಯಮಂತ್ರಿ ಸಭೆ ಕರೆಯಲು ಒಪ್ಪಿದರೆ, ಅಲ್ಲಿನ ಕಾಂಗ್ರೆಸ್ ಮುಖಂಡರನ್ನು ನಾನು ಒಪ್ಪಿಸಲು ಪ್ರಯತ್ನಿಸುತ್ತೇನೆ ಎಂದು ಹಿಂದಿನ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದೆ. ಆದರೆ, ಗೋವಾ ಸಭೆ ಕರೆಯಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಕರೆದ ಸಭೆಗೆ ಬರಲೂ ಸಮ್ಮತಿಸಲಿಲ್ಲ’ ಎಂದರು.

‘ಯಡಿಯೂರಪ್ಪ ಬರೆದ ಪತ್ರಕ್ಕೆ ಪ್ರತಿಯಾಗಿ ಗೋವಾ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಪರಿವರ್ತನಾ ರ‍್ಯಾಲಿಯಲ್ಲಿ ಅದನ್ನು ಯಡಿಯೂರಪ್ಪ ಓದಿದ್ದಾರೆ. ಪ್ರತಿಷ್ಠೆ, ಶಿಷ್ಟಾಚಾರ ಎಲ್ಲವನ್ನೂ ಬದಿಗಿಟ್ಟು ನಾನು ಮರುದಿನವೇ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಅದಕ್ಕೂ ಉತ್ತರ ಇಲ್ಲ. ಮುಖ್ಯ ಕಾರ್ಯದರ್ಶಿ ಬರೆದ ಪತ್ರಕ್ಕೂ ಉತ್ತರ ಕೊಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗೋವಾ ನೀರಾವರಿ ಸಚಿವರೇ ಪರ‍್ರೀಕರ್ ಪತ್ರವನ್ನು ರಾಜಕೀಯ ಸ್ಟಂಟ್ ಎಂದಿದ್ದಾರೆ. ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಮುಖಂಡರ ಮನವೊಲಿಸಿ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿಲ್ಲ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ’ ಎಂದರು.

‘ಸಿದ್ದರಾಮಯ್ಯ, ಪಾಟೀಲಗೆ ಸ್ವಪ್ರತಿಷ್ಠೆ’

‘ಮಹದಾಯಿ ವಿವಾದ ಬಗೆಹರಿಯುವುದಕ್ಕಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ಸ್ವಪ್ರತಿಷ್ಠೆ ಮುಖ್ಯವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

‘ಪ್ರಧಾನಿ‌ ಬಳಿ ನಿಯೋಗ ಹೋಗುವುದು ವ್ಯರ್ಥ ಎಂದು ಎಂ.ಬಿ.‌ ಪಾಟೀಲ ಹೇಳಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಸಭೆಯಲ್ಲಿ ಆ ವಿಷಯ ಉಲ್ಲೇಖಿಸಿದ್ದೇನೆ. ಪರ್ರೀಕರ್ ಬರೆದ‌ ಪತ್ರವೇ ಸರಿ ಇಲ್ಲ ಎಂದು ಮುಖ್ಯಮಂತ್ರಿ ಹೇಳಿ, ರಾಜಕೀಯ ಮಾಡುತ್ತಿದ್ದಾರೆ’ ಎಂದರು.

‘ರಾಹುಲ್‌ ಮಧ್ಯಪ್ರವೇಶ: ಅವಾಸ್ತವಿಕ ವಾದ’

‘ಅಮಿತ್ ಶಾ ಅವರಂತೆ ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಕೂಡಾ ಮುತುವರ್ಜಿ ವಹಿಸಿದರೆ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಸಾಧ್ಯ’ ಎಂದು ಸಚಿವ ಸದಾನಂದ ಗೌಡ ಮತ್ತು ಸಂಸದ ಪ್ರಹ್ಲಾದ ಜೋಷಿ ವಾದಿಸಿದರು. ಈ ಹಂತದಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಜಟಾಪಟಿ ನಡೆಯಿತು.

‘ಮೋದಿ ಸಾಂವಿಧಾನಿಕ ಅಧಿಕಾರ ಹೊಂದಿದ್ದಾರೆ. ರಾಹುಲ್‌ ಏನು ಪ್ರಧಾನಿಯೇ’ ಎಂದು ಮುಖ್ಯಮಂತ್ರಿ ಕೆಣಕಿದರು. ‘ರಾಹುಲ್‍ ಮಧ್ಯಪ್ರವೇಶ ಮಾಡಬೇಕು ಎಂಬುದು ಅವಾಸ್ತವಿಕ ವಾದ. ಜಲವಿವಾದಗಳ ಸಂದರ್ಭಗಳಲ್ಲಿ ಇಂದಿರಾಗಾಂಧಿ ಮತ್ತು ಮನಮೋಹನ್‍ಸಿಂಗ್ ಮಧ್ಯಪ್ರವೇಶ ಮಾಡಿದಂತೆ ಮೋದಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ಮಹದಾಯಿ ವಿಷಯದಲ್ಲಿ 14 ಬಾರಿ ಮಾತುಕತೆ ನಡೆದು ವಿವಾದ ಬಗೆಹರಿಯದ ಕಾರಣ ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನಮೋಹನ್‍ ಸಿಂಗ್ ಪ್ರಮಾಣ ಪತ್ರ ಸಲ್ಲಿಸಿದ್ದರು’ ಎಂದರು.

‘ಮುಂದಿನ ಹೋರಾಟ: ಶೀಘ್ರ ತೀರ್ಮಾನ’

‘ಮಹದಾಯಿ ವಿವಾದದ ಸಂಬಂಧ ಮುಂದಿನ ಹೋರಾಟ ಹೇಗಿರಬೇಕೆಂಬ ಕುರಿತು ಸದ್ಯದಲ್ಲೇ ರೈತರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.

‘ಕಾನೂನು ಹೋರಾಟ ನಡೆಸಬೇಕೇ, ಚುನಾವಣೆ ಬಹಿಷ್ಕರಿಸಬೇಕೇ ಅಥವಾ ನಿಯೋಗದಲ್ಲಿ ರಾಷ್ಟ್ರಪತಿ ಬಳಿಗೆ ತೆರಳಬೇಕೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

‘ಈ ವಿವಾದ ಬಗೆಹರಿಸಲು ಎಲ್ಲ ಪಕ್ಷಗಳು ಒಂದಾಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಮೂರೂ ಪಕ್ಷಗಳು ವಿಫಲವಾಗಿವೆ. ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಎದುರಾಗಿದೆ’ ಎಂದು ಅವರು ನುಡಿದರು

* ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ. ಅವರು ಸಮಯ ನೀಡಿದರೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯುತ್ತೇನೆ

–ಸಿದ್ದರಾಮಯ್ಯ, ಮುಖ್ಯಮಂತ್ರಿ

* ವಿವಾದ ಬಗೆಹರಿಯುವುದಕ್ಕಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ಸ್ವಪ್ರತಿಷ್ಠೆ ಮುಖ್ಯವಾಗಿದೆ

–ಜಗದೀಶ ಶೆಟ್ಟರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

ಮುಖ್ಯಾಂಶಗಳು

* ಪರ‍್ರೀಕರ್‌ ಸಭೆ ಕರೆಯಲಿ: ಮುಖ್ಯಮಂತ್ರಿ

* ಕಾನೂನು ಸಲಹೆಗೆ ರೈತರ ತೀರ್ಮಾನ

* ನೀರಿನ ವಿಷಯದಲ್ಲಿ ರಾಜಕೀಯ ಬೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.