ADVERTISEMENT

ಸಿದ್ಧ ಗಂಗಾಮಠಕ್ಕೆ ಮರಳಿದ ಡಾ.ಶಿವಕುಮಾರ ಸ್ವಾಮೀಜಿ: ಒಂದು ವಾರ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ತುಮಕೂರಿನ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಶನಿವಾರ ಸಂಜೆ ಮಠಕ್ಕೆ ಮರಳಿದರು. ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹಾಗೂ ಡಾ.ಪರಮೇಶ್ ಅವರ ನೆರವಿನೊಂದಿಗೆ ನಡೆದುಕೊಂಡು ಸೀದಾ ಹಳೆ ಮಠದ ವಿಶ್ರಾಂತಿ ಕೊಠಡಿಗೆ ತೆರಳಿದರು.
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ತುಮಕೂರಿನ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಶನಿವಾರ ಸಂಜೆ ಮಠಕ್ಕೆ ಮರಳಿದರು. ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹಾಗೂ ಡಾ.ಪರಮೇಶ್ ಅವರ ನೆರವಿನೊಂದಿಗೆ ನಡೆದುಕೊಂಡು ಸೀದಾ ಹಳೆ ಮಠದ ವಿಶ್ರಾಂತಿ ಕೊಠಡಿಗೆ ತೆರಳಿದರು.   

ತುಮಕೂರು: ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಶನಿವಾರ ಸಂಜೆ ಮಠಕ್ಕೆ ಮರಳಿದರು. ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಡಾ.ಪರಮೇಶ್ ಅವರ ನೆರವಿನೊಂದಿಗೆ ನಡೆದುಕೊಂಡು ಸೀದಾ ಹಳೆ ಮಠದ ವಿಶ್ರಾಂತಿ ಕೊಠಡಿಗೆ ತೆರಳಿದರು.

ಸ್ವಾಮೀಜಿಯವರ ಬರುವಿಕೆಗೆ ಕಾಯುತ್ತಿದ್ದ ಮಠದ ವಿದ್ಯಾರ್ಥಿಗಳು ಮತ್ತು ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿ ಸಂಭ್ರಮಿಸಿದರು.

ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಸ್ವಾಮೀಜಿಯವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಣ್ಯರೂ ಸೇರಿದಂತೆ ಭಕ್ತರಿಗೆ ದರ್ಶನಕ್ಕೆ ಒಂದು ವಾರ ಅವಕಾಶವಿಲ್ಲ. ಭಕ್ತರೇ ಇದನ್ನು ಅರಿತುಕೊಂಡು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮಠದಲ್ಲಿ ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡುತ್ತಿರುವ ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್ ಅವರು ಮಾತನಾಡಿ, ‘ಹಳೇ ಮಠದಲ್ಲಿರುವ ಸ್ವಾಮೀಜಿಯವರ ವಿಶ್ರಾಂತಿ ಕೊಠಡಿಯನ್ನು ಈಗ ತಾತ್ಕಾಲಿಕವಾಗಿ ಸಂಪೂರ್ಣ ತೀವ್ರ ನಿಗಾ ಘಟಕವಾಗಿ(ಐಸಿಯು) ಪರಿವರ್ತಿಸಲಾಗಿದೆ’ ಎಂದು ಹೇಳಿದರು.

‘ಆಹಾರ ಸ್ವೀಕರಿಸಲು, ಪೂಜೆ ಮಾಡಲು ಏನೂ ತೊಂದರೆ ಆಗಿಲ್ಲ. ಶುಕ್ರವಾರ ರಾತ್ರಿಯೇ ಇಡ್ಲಿ ಸೇವಿಸಿದ್ದಾರೆ. ಆದಾಗ್ಯೂ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಾಗಿದೆ. ಹೀಗಾಗಿ, ಕನಿಷ್ಠ ಐದಾರು ದಿನ ಭಕ್ತರಿಗೆ ಭೇಟಿಗೆ ಅವಕಾಶ ಕೊಡಬಾರದು ಎಂದು ಸಿದ್ಧಲಿಂಗ ಸ್ವಾಮೀಜಿಯವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿಯವರನ್ನು ಶಾಸಕ ಬಿ.ಸುರೇಶ್‌ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ, ಉಪವಿಭಾಗಾಧಿಕಾರಿ ತಬುಸಮ್ ಜಹೇರಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.