ADVERTISEMENT

ನೌಕರರಿಗೆ ಭರ್ಜರಿ ಕೊಡುಗೆ ನಿರೀಕ್ಷೆ: ಇಂದು ವೇತನ ಆಯೋಗದ ವರದಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ನೌಕರರಿಗೆ ಭರ್ಜರಿ ಕೊಡುಗೆ ನಿರೀಕ್ಷೆ: ಇಂದು ವೇತನ ಆಯೋಗದ ವರದಿ
ನೌಕರರಿಗೆ ಭರ್ಜರಿ ಕೊಡುಗೆ ನಿರೀಕ್ಷೆ: ಇಂದು ವೇತನ ಆಯೋಗದ ವರದಿ   

ಬೆಂಗಳೂರು: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಿರುವ  ಆರನೇ ವೇತನ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ (ಇದೇ 31) ವರದಿ ಸಲ್ಲಿಸಲಿದೆ.

ಬೆಳಿಗ್ಗೆ 10.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸ ಮೂರ್ತಿ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮೊದಲ ವರದಿಯನ್ನು ಸಲ್ಲಿಸಲಿದ್ದಾರೆ.

ಇನ್ನು ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ADVERTISEMENT

ರಾಜ್ಯದಲ್ಲಿರುವ 5.45 ಲಕ್ಷ ನೌಕರರು, 3 ಲಕ್ಷ ನಿವೃತ್ತ ನೌಕರರು ಹಾಗೂ ಅವರ ಅವಲಂಬಿತರನ್ನು ಓಲೈಸುವ ದೃಷ್ಟಿಯಿಂದ ಗಣನೀಯವಾಗಿ ವೇತನ ಹೆಚ್ಚಿಸುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ವೇತನ ಶ್ರೇಣಿ ಇರುವವರಿಗೆ ಹೆಚ್ಚಿನ ಪ್ರಮಾಣದ ಫಿಟ್‌ಮೆಂಟ್‌ (ವೇತನ ತಾರತಮ್ಯ ನಿವಾರಿಸಲು ನೀಡುವ ಮೊತ್ತ) ಹಾಗೂ ಈಗಾಗಲೇ ₹40,000 ಮೂಲ ವೇತನ ಇರುವ ನೌಕರರಿಗೆ ಕಡಿಮೆ ಪ್ರಮಾಣದ ಫಿಟ್‌ಮೆಂಟ್‌ ನೀಡಲು ಆಯೋಗ ಶಿಫಾರಸು ಮಾಡುವ ಸಂಭವ ಇದೆ.

ವಾರದಲ್ಲಿ ಐದು ದಿನ ಕೆಲಸದ ಅವಧಿ ನಿಗದಿ ಮಾಡಬೇಕು ಎಂಬ ಬೇಡಿಕೆ ಇತ್ತು.

ಅದರ ಬದಲು ಈಗ ನೀಡುತ್ತಿರುವ ಪ್ರತಿ ಎರಡನೇ ಶನಿವಾರದ ರಜೆ ಜತೆ, ನಾಲ್ಕನೇ ಶನಿವಾರವೂ ರಜೆ ನೀಡುವ ಬಗ್ಗೆ ಆಯೋಗ ಶಿಫಾರಸು ಮಾಡುವ ಸಾಧ್ಯತೆಯೂ ಇದೆ.

ಆಡಳಿತ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ಶಿಫಾರಸು ಮಾಡುವಂತೆ ಆಯೋಗಕ್ಕೆ ಸರ್ಕಾರ ಸೂಚಿಸಿತ್ತು. ಈ ವರದಿ ಸಲ್ಲಿಸಲು ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಕೋರಿ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ.

ಆಡಳಿತ ಸುಧಾರಣೆ ಹಾಗೂ ವಿವಿಧ ಭತ್ಯೆಗಳ ಹೆಚ್ಚಳಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಎರಡನೇ ವರದಿಯಲ್ಲಿ ಸಲ್ಲಿಸಲಾಗುವುದು ಎಂದು ಆಯೋಗದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.