ADVERTISEMENT

‘ಕೇಂದ್ರಕ್ಕೆ ಉದ್ಯಮಿಗಳದ್ದೇ ಚಿಂತೆ’

ರೈತರ ಸಮಾವೇಶದಲ್ಲಿ ಅಣ್ಣಾ ಹಜಾರೆ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
‘ಕೇಂದ್ರಕ್ಕೆ ಉದ್ಯಮಿಗಳದ್ದೇ ಚಿಂತೆ’
‘ಕೇಂದ್ರಕ್ಕೆ ಉದ್ಯಮಿಗಳದ್ದೇ ಚಿಂತೆ’   

ಬೆಂಗಳೂರು: ಕೇಂದ್ರ ಸರ್ಕಾರ ಉದ್ಯಮಿಗಳ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದೆ. ರೈತರ ಬಗ್ಗೆ ಕಿಂಚಿತ್ತೂ ಚಿಂತೆ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಕಿಸಿದರು.

ಡಾ.ಸ್ವಾಮಿನಾಥನ್‌ ವರದಿ ಜಾರಿ ಮತ್ತು ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಯಾವ ಉದ್ಯಮಿಯೂ ಆರ್ಥಿಕ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ, ದೇಶದಲ್ಲಿ 12 ಲಕ್ಷ ರೈತರು ಸಾಲ, ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಕೇಂದ್ರ ಈಡೇರಿಸಿಲ್ಲ. ಈಗ ನಮ್ಮ ಮಾತನ್ನೂ ಕೇಳುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ನಾನು ಮದುವೆಯಾಗಿದ್ದರೆ ನನಗೆ ಚಿಕ್ಕಪರಿವಾರ ಇರುತ್ತಿತ್ತು. ಬ್ರಹ್ಮಚಾರಿಯಾಗಿದ್ದರಿಂದ ಇಡೀ ದೇಶದ ಜನರೇ ನನ್ನ ಪಾಲಿಗೆ ದೊಡ್ಡ ಪರಿವಾರ. ನಾನು ಓಟಿಗಾಗಿ ಮಾತನಾಡುತ್ತಿಲ್ಲ. ರೈತರ ಸಲುವಾಗಿಯೇ ದೇಶದಾದ್ಯಂತ ಸಂಚರಿಸುತ್ತಿದ್ದೇನೆ. 60 ವರ್ಷ ಮೇಲ್ಪಟ್ಟ ರೈತನಿಗೆ ಪ್ರತಿ ತಿಂಗಳು ₹5,000 ಪಿಂಚಣಿ ಕೊಡಿಸಲು ಹೋರಾಡುತ್ತೇನೆ’ ಎಂದರು.

ಕಿಸಾನ್‌ ಏಕ್ತಾ ಮತ್ತು ಕೃಷಿ ಸಂಘಟನೆಯ ಸಂಚಾಲಕ ದೇವೇಂದ್ರ ಶರ್ಮಾ, ‘ಚಹಾ ಮಾರಿದವರು ಪ್ರಧಾನಿಯಾಗಿರುವುದನ್ನು ಗೌರವಿಸುತ್ತೇವೆ. ಹಾಗೆಯೇ ಮುಂದೆ ರೈತನನ್ನು ಪ್ರಧಾನಿಯನ್ನಾಗಿಸಲು ಮತ ಅಸ್ತ್ರ ಪ್ರಯೋಗಿಸುತ್ತೇವೆ. ಮೋದಿ ಅವರಿಗೂ ತಕ್ಕ ಪಾಠ ಕಲಿಸುತ್ತೇವೆ’ ಎಂದರು.

‘ರೈತರ ಕೊಲೆಗಳಿಗೆ ಪ್ರಧಾನಿ ಹೊಣೆ’

‘ದೇಶದಲ್ಲಿ 2015ರಿಂದ ಇದುವರೆಗೆ ನಡೆದಿರುವ ರೈತರ ಎಲ್ಲ ಕೊಲೆಗಳಿಗೂ ಪ್ರಧಾನಿಯೇ ನೇರ ಕಾರಣ. ಅವರಿಗೆ ಆತ್ಮಸಾಕ್ಷಿ ಇದ್ದರೆ ಈ ಹೊಣೆ ಹೊರಲಿ’ ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಕಿಡಿಕಾರಿದರು.

‘ನೀವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ನಿಮ್ಮ ಕಿಸೆಗೆ ತಂದು ಸುರಿಯುತ್ತೇನೆ ಎಂದು ರೈತರಿಗೆ ಮೋದಿ ಭರವಸೆ ನೀಡಿದ್ದರು. ಈಗ ಮೂರೂವರೆ ವರ್ಷ ಅಧಿಕಾರ ಮುಗಿದರೂ ಅವರು ರೈತರಿಗಾಗಿ ಏನೂ ಮಾಡಲಿಲ್ಲ. 23ರಂದು ದೆಹಲಿಯಲ್ಲಿ ಉಪವಾಸ ಕುಳಿತು ಜೈಲಿಗೆ ಹೋಗುವುದಷ್ಟೇ ಅಲ್ಲ, ರೈತರಿಗೆ ಸುಳ್ಳು ಭರವಸೆ ನೀಡಿ, ರೈತರನ್ನು ಕೊಲ್ಲುತ್ತಿರುವ ಎಲ್ಲ ರಾಜಕೀಯ ಪಕ್ಷಗಳ ಕೊಲೆಗಾರರನ್ನು ಜೈಲಿಗೆ ಕಳುಹಿಸೋಣ’ ಎಂದರು.

***

ಅಣ್ಣಾ ಹಜಾರೆ ಆಗ ಉಪವಾಸ ಸತ್ಯಾಗ್ರಹ ಮಾಡಿದ್ದಕ್ಕೆ ಮನಮೋಹನ್‌ ಸಿಂಗ್‌ ಮನೆ ಸೇರಿದರು. ಈಗ ಮತ್ತೇ ಉಪವಾಸ ಕೂರುವುದರಿಂದ ಮೋದಿ ಮನೆಗೆ ಹೋಗುವುದು ಖಚಿತ 
– ನಟರಾಜ್‌ ಹುಳಿಯಾರ್‌, ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕ

***

ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳು ನರೇಂದ್ರ ಮೋದಿಯವರಿಗೆ ಮರೆತು ಹೋಗಿವೆ.
– ವಿ.ಎಂ.ಸಿಂಗ್‌, ಅಖಿಲ ಭಾರತ ಕಿಸಾನ್‌  ಮುಕ್ತಿ ಹೋರಾಟ ಸಮಿತಿ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.