ADVERTISEMENT

‘ಕೇಂದ್ರದ ಅನುದಾನ: ಮೋದಿ ಸ್ಪಷ್ಟನೆ ನೀಡಲಿ’

ಅಮಿತ್‌ ಶಾ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍, ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಬೆಂಗಳೂರು: ಭಾನುವಾರ (ಫೆ. 4) ನಗರಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ಈವರೆಗೆ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತೀ ಬಾರಿ ಬಂದಾಗಲೂ ರಾಜ್ಯಕ್ಕೆ ಈವರೆಗೆ ಮೂರು ಲಕ್ಷ ಕೋಟಿ ಅನುದಾನ ನೀಡಿರುವುದಾಗಿ ಸುಳ್ಳು ಹೇಳುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ ಗುಂಡೂರಾವ್ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಜಂಟಿ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

14ನೆ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಇನ್ನೂ ₹ 10,553 ಕೋಟಿ ಬರಲು ಬಾಕಿ ಇದೆ. ಈ ಹಣವನ್ನು ಬಿಡುಗಡೆ ಮಾಡಬೇಕು ಎಂದೂ ಉಭಯ ನಾಯಕರು ಒತ್ತಾಯಿಸಿದರು.

ADVERTISEMENT

ಈಗಾಗಲೇ ಮೂರು ಬಾರಿ ರಾಜ್ಯಕ್ಕೆ ಬಂದಿರುವ ಶಾ, ಕೇಂದ್ರ ನೀಡಿದ ಅನುದಾನ ಖರ್ಚಿನ ಬಗ್ಗೆ ಲೆಕ್ಕ ಕೊಡುವಂತೆ ಕೇಳಿದ್ದಾರೆ. ಹಿಂದೆಂದೂ ಸಿಗದಷ್ಟು ಅನುದಾನ ಎನ್‍ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದರು.

ರಾಜ್ಯಕ್ಕೆ 14ನೇ ಹಣಕಾಸು ಆಯೋಗದಂತೆ ಐದು ವರ್ಷಗಳಲ್ಲಿ ₹ 2,02,370 ಕೋಟಿ ಬರಬೇಕಿದ್ದು ಈಗಾಗಲೇ ಮೂರು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ₹ 95,204 ಕೋಟಿ ಅನುದಾನ ನೀಡಬೇಕಿತ್ತು. ಈವರೆಗೆ ₹ 84,651 ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ರಾಜ್ಯಕ್ಕೆ ಬಿಡುಗಡೆ ಮಾಡುವ ಅನುದಾನ, ಕೇಂದ್ರ ಸರ್ಕಾರ ನೀಡುವ ಭಿಕ್ಷೆಯಲ್ಲ. ರಾಜ್ಯದಿಂದ ವಸೂಲಿಯಾಗುವ ತೆರಿಗೆಯಲ್ಲಿ ಶೇ 47ರಷ್ಟು ವಾಪಸು ನೀಡಬೇಕಿದೆ. ನಮ್ಮ ತೆರಿಗೆಯಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆ. ಆದರೆ ಶಾ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.

ಅನುದಾನ ಬಿಡುಗಡೆ ಕುರಿತು ಮೋದಿ ವಿವರಣೆ ನೀಡದಿದ್ದರೆ, ಶಾ ಅವರಿಗೆ ಸುಳ್ಳಿನ ಚಕ್ರವರ್ತಿ ಎಂಬ ಹೆಸರನ್ನು ಬ್ರ್ಯಾಂಡ್ ಮಾಡಲು ಪಕ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದೂ ಎಚ್ಚರಿಕೆ ನೀಡಿದರು.

ಎರಡು ಪಟ್ಟು ಅನುದಾನ

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಳೆದ ಅವಧಿಗಿಂತ ಎರಡು ಪಟ್ಟು ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

14ನೇ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆ ಪ್ರಮಾಣವನ್ನು ಶೇ 32ರಿಂದ ಶೇ 42ಕ್ಕೆ ಏರಿಕೆ ಮಾಡಲಾಗಿದೆ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಯುಪಿಎ ಅವಧಿಯಲ್ಲಿ ರಾ‌ಜ್ಯಕ್ಕೆ ₹ 73,209 ಕೋಟಿ ನೀಡಿತ್ತು. ಬಿಜೆಪಿ ಅವಧಿಯ ಮೂರು ವರ್ಷದಲ್ಲೆ ₹ 1,35,089 ಕೋಟಿ ಬಿಡುಗಡೆಯಾಗಿದೆ. ಇದಲ್ಲದೇ ಕೇಂದ್ರ ವಲಯದ ಇತರ ಯೋಜನೆಗಳಿಂದ ಒಟ್ಟು ₹ 3 ಲಕ್ಷ ಕೋಟಿ ಅನುದಾನ ಬರಲಿದೆ. ಈ ಅಂಕಿ ಅಂಶ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಪಡೆದ ಮಾಹಿತಿ ಎಂದರು.

‘ಕೇಂದ್ರ ಬಿಡುಗಡೆ ಮಾಡಿದ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ಕೊಡದೆ ಇರುವುದರಿಂದ ಉಳಿದ ಹಣ ಬಿಡುಗಡೆಯಾಗಿಲ್ಲ. ಈ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರ ಏಕೆ ಕೊಟ್ಟಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಕಾಂಗ್ರೆಸ್‌ ಪಕ್ಷ ಕೊಟ್ಟಿರುವ ಲೆಕ್ಕವನ್ನು ನಾವು ಒಪ್ಪುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭರವಸೆ ನೀಡಿಲ್ಲ: ‘ಪ್ರಧಾನಿ ನರೇಂದ್ರ ಮೋದಿ ಮನವೊಲಿಸಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿಸುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ ನೀಡಿಲ್ಲ’ ಎಂದು ಸಂಸದ ಸುರೇಶ ಅಂಗಡಿ ಶನಿವಾರ ಬೆಳಗಾವಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.