ADVERTISEMENT

ಸೀಮಾ ಸುರಕ್ಷೆಗೆ ಮುಧೋಳ ನಾಯಿ ಬಲ!

ವೆಂಕಟೇಶ್ ಜಿ.ಎಚ್
Published 4 ಫೆಬ್ರುವರಿ 2018, 19:48 IST
Last Updated 4 ಫೆಬ್ರುವರಿ 2018, 19:48 IST
ಮುಧೋಳ ತಳಿ ನಾಯಿ
ಮುಧೋಳ ತಳಿ ನಾಯಿ   

ಬಾಗಲಕೋಟೆ: ಭಾರತೀಯ ಸೇನೆಗೆ ಸೇರ್ಪಡೆಯ ನಂತರ, ಇದೀಗ ಮುಧೋಳ ತಳಿಯ ನಾಯಿ, ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಹಾಗೂ ಇಂಡೊ– ಟಿಬೆಟ್ ಗಡಿ ಪೊಲೀಸ್‌ (ಐಟಿಬಿಪಿ) ಪಡೆಗಳಲ್ಲೂ ತನ್ನ ಛಾಪು ಮೂಡಿಸಲಿದೆ.

ಉತ್ತರಪ್ರದೇಶದ ಮೀರತ್‌ನಲ್ಲಿರುವ ಸೇನೆಯ ರಿಮೌಂಟ್‌ ಅಂಡ್ ವೆಟರ್ನರಿ ಕಾರ್ಪ್‌ ಸೆಂಟರ್‌ನಲ್ಲಿ (ಆರ್‌ವಿಸಿ) 10 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ, ಕಾಶ್ಮೀರದಲ್ಲಿ ಸೇವೆಗೆ ನಿಯೋಜನೆಗೊಂಡಿರುವ ಮುಧೋಳ ತಳಿ ನಾಯಿಯ ಕಾರ್ಯವೈಖರಿಯನ್ನು ಎಸ್‌ಎಸ್‌ಬಿ ಹಾಗೂ ಐಟಿಬಿಪಿ ಗಮನಿಸಿವೆ. ಪರಿಣಾಮವಾಗಿ, ಈಗ ತಮ್ಮ ಶ್ವಾನದಳದಲ್ಲೂ ಈ ತಳಿಗೆ ಸ್ಥಾನ ನೀಡಲು ಮುಂದಾಗಿವೆ.

ತಲಾ ಆರು ಮರಿಗಳಿಗೆ ಬೇಡಿಕೆ: ‘ರಾಜಸ್ಥಾನದ ಅಲ್ವಾರ್‌ನ ಎಸ್‌ಎಸ್‌ಬಿ ಕೇಂದ್ರದ ಸಹಾಯಕ ಕಮಾಂಡರ್ ಡಾ.ಸಂಜಯ್ ಪರೇಕ್ಕರ್ ನೇತೃತ್ವದ ತಂಡ ಜನವರಿ 16ರಂದು ಮುಧೋಳ ತಾಲ್ಲೂಕು ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿತ್ತು. ಈ ವೇಳೆ ಪರೇಕ್ಕರ್ ಅವರು ಆರು ಮರಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಐಟಿಬಿಪಿ ಅಧಿಕಾರಿಗಳು ಕೇಂದ್ರಕ್ಕೆ ಕರೆ ಮಾಡಿದ್ದರು. ಅವರೂ ಆರು ಮರಿಗಳನ್ನು ಕೇಳಿದ್ದಾರೆ’ ಎಂದು ಕೇಂದ್ರದ ಮುಖ್ಯಸ್ಥ ಡಾ.ಮಹೇಶ ಎಸ್‌.ದೊಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಮೊದಲು 10 ಮರಿಗಳನ್ನು ಒಯ್ದಿದ್ದ ಭಾರತೀಯ ಸೇನೆ ಅಧಿಕಾರಿಗಳು ಈಗ ಎರಡನೇ ಹಂತದಲ್ಲಿ ಮತ್ತೆ 12ಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಮಾರ್ಚ್‌ ವೇಳೆಗೆ ಎಲ್ಲರಿಗೂ ಪೂರೈಸಲಾಗುವುದು’ ಎಂದು ಅವರು ಹೇಳಿದರು.

‘ಸೇನೆ ಹಾಗೂ ಅರೆಸೇನಾ ಪಡೆಯಲ್ಲಿ ತರಬೇತಿಗೆ ಮೂರು ತಿಂಗಳ ಮರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೇಂದ್ರದಲ್ಲಿ ಸದ್ಯ 15 ಮರಿಗಳು ಲಭ್ಯವಿದ್ದು,  ಸ್ಥಳೀಯ ರೈತರಿಂದಲೂ ಮರಿಗಳನ್ನು ಪಡೆಯಲಾಗುವುದು’ ಎಂದು ತಿಳಿಸಿದರು.

ರೈತರಿಗೂ ಮನ್ನಣೆ: ‘ಬೀದರ್‌ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗವಾದ ತಿಮ್ಮಾಪುರ ಕೇಂದ್ರ, ಮುಧೋಳ ನಾಯಿ ತಳಿ ಸಂವರ್ಧನೆಯಲ್ಲಿ ತೊಡಗಿದೆ. ಈ ಕಾರ್ಯದಲ್ಲಿ ಈಗ ಸ್ಥಳೀಯರು ಕೈ ಜೋಡಿಸಿದ್ದಾರೆ. ಕೇಂದ್ರದ ಮಾರ್ಗದರ್ಶನದಲ್ಲಿ ಮುಧೋಳ ತಾಲ್ಲೂಕಿನ 20ಕ್ಕೂ ಹೆಚ್ಚು ರೈತರು ನಾಯಿಗಳನ್ನು ಸಾಕುತ್ತಿದ್ದಾರೆ. ಅವರಲ್ಲಿ ಇಬ್ಬರಿಗೆ ಹರಿಯಾಣದ ಕರ್ನಾಲ್‌ನಲ್ಲಿರುವ ನ್ಯಾಶನಲ್ ಬ್ಯುರೊ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸ್‌ ಸೆಂಟರ್ (ಎನ್‌ಬಿಎಜಿಆರ್‌) ಮನ್ನಣೆ ನೀಡಿದೆ’ ಎಂದು ಡಾ.ಮಹೇಶ್ ತಿಳಿಸಿದರು.

**

ಇತಿಹಾಸ..

ಪರ್ಶಿಯನ್ನರು, ಮಂಗೋಲಿಯನ್ನರು, ಮೊಗಲರು ತಮ್ಮೊಂದಿಗೆ ಬೇಟೆಗಾಗಿ, ಕಾವಲಿಗೆ, ಶತ್ರುಗಳ ಚಲನವಲನ ಅರಿಯಲು ಸ್ಲೋಹಿ, ಸಾಲೂಕಿ ಮತ್ತು ಗ್ರೇಹೌಂಡ್ ತಳಿಯ ಶ್ವಾನಗಳನ್ನು ತಂದಿದ್ದರು. ಹೀಗೆ ದೇಶದ ವಿವಿಧೆಡೆ ಹಂಚಿಕೆಯಾದ ಶ್ವಾನಗಳು ಸ್ಥಳೀಯ ನಾಯಿಗಳೊಂದಿಗೆ ಬೆರೆತಾಗ ಮುಧೋಳ ತಳಿ ಹುಟ್ಟಿದೆ. ಮುಂದೆ ಮುಧೋಳ ಪ್ರಾಂತ್ಯವನ್ನು ಆಳಿದ ಶ್ರೀಮಂತ ರಾಜೇಸಾಬ್ ಮಲೋಜಿರಾವ್ ಘೋರ್ಪಡೆ ಈ ತಳಿಯ ಸಂವರ್ಧನೆಗೆ ಹೆಚ್ಚು ಒತ್ತುಕೊಟ್ಟರು.

ಇಂಗ್ಲೆಂಡ್‌ಗೆ ತೆರಳಿದಾಗ ಐದನೇ ಕಿಂಗ್‌ ಜಾರ್ಜ್‌ಗೆ ಮುಧೋಳ ತಳಿ ನಾಯಿಯನ್ನು ಕಾಣಿಕೆಯಾಗಿ ಕೊಟ್ಟಿದ್ದರು ಎಂದು ತಿಮ್ಮಾಪುರ ಸಂಶೋಧನಾ ಕೇಂದ್ರದ ಮಾಹಿತಿ ಹೇಳುತ್ತದೆ.

ಶಿವಾಜಿ, ಶಾಹು ಮಹಾರಾಜರ ಸೇನೆಯಲ್ಲೂ ಸ್ಥಾನ ಪಡೆದಿದ್ದ ಮುಧೋಳ ತಳಿಯನ್ನು ಉಳಿಸಿ ಬೆಳೆಸಲು ದೇಶದಲ್ಲಿಯೇ ಮೊದಲ ಶ್ವಾನ ತಳಿ ಸಂವರ್ಧನಾ ಕೇಂದ್ರ ಆರಂಭಿಸಲಾಗಿದೆ. ಮುಧೋಳ ತಳಿ ನೆನಪಿನಲ್ಲಿ ಕೇಂದ್ರ ಸರ್ಕಾರ ಅಂಚೆ ಚೀಟಿ ಕೂಡ ಹೊರತಂದಿದೆ.

**

ಮುಖ್ಯಾಂಶಗಳು..

ಕಂದು ಬಣ್ಣದ ತೀಕ್ಷ್ಮ ಕಣ್ಣು, ವೇಗದ ಓಟ, ಆಕ್ರಮಣಕಾರಿ ವ್ಯಕ್ತಿತ್ವ
ಸ್ಥಳೀಯವಾಗಿ ಬೇಟೆಗೆ, ಹೊಲ,ಗದ್ದೆ, ತೋಟಗಳಲ್ಲಿ ಕಾವಲಿಗೆ ಬಳಕೆ
ಜೀವಿತಾವಧಿ: 13ರಿಂದ 14 ವರ್ಷಗಳು
ಎತ್ತರ: 26ರಿಂದ 28 ಇಂಚು
ತೂಕ: 35ರಿಂದ 36 ಕೆ.ಜಿ
ಬಣ್ಣ: ಬಿಳಿ, ಕಪ್ಪು, ಕಂದು, ಬೂದು ಹಾಗೂ ಮಿಶ್ರ
ಸಣ್ಣ ತಲೆ, ಚೂಪು ಮೂತಿ, ಉದ್ದನೆಯ ಕುತ್ತಿಗೆ, ಬಲಿಷ್ಠ ಸ್ನಾಯು, ಹೊಟ್ಟೆಯ ಭಾಗ ತೆಳುವಾಗಿರುತ್ತದೆ. ಉದ್ದನೆಯ ಪಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.