ADVERTISEMENT

ಕಲಾಪಕ್ಕೆ ಸಚಿವ, ಶಾಸಕ, ಅಧಿಕಾರಿಗಳ ಗೈರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಬುಧವಾರ ಮಧ್ಯಾಹ್ನ ವಿಧಾನಸಭಾ ಕಲಾಪದಲ್ಲಿ ಬೆರಳೆಣಿಕೆಯಷ್ಟು ಶಾಸಕರು ಹಾಜರಿದ್ದರು. -ಪ್ರಜಾವಾಣಿ ಚಿತ್ರ
ಬುಧವಾರ ಮಧ್ಯಾಹ್ನ ವಿಧಾನಸಭಾ ಕಲಾಪದಲ್ಲಿ ಬೆರಳೆಣಿಕೆಯಷ್ಟು ಶಾಸಕರು ಹಾಜರಿದ್ದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಧಾನಮಂಡಲ ಅಧಿವೇಶನದ ಮೂರನೇ ದಿನ ಉಭಯ ಸದನಗಳಲ್ಲೂ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ಗೈರು ಕಲಾಪದಲ್ಲಿ ಎದ್ದು ಕಾಣಿಸಿತು.

ವಿಧಾನಸಭೆ ಕಲಾಪ ಬೆಳಿಗ್ಗೆ ಅರ್ಧಗಂಟೆ ವಿಳಂಬವಾಗಿ ಆರಂಭವಾದರೂ ಸಚಿವರಾದ ಎಚ್.ಸಿ. ಮಹದೇವಪ್ಪ, ತನ್ವೀರ್‌ ಸೇಠ್, ಕೃಷ್ಣ ಬೈರೇಗೌಡ, ಎಂ.ಆರ್. ಸೀತಾರಾಂ ಹಾಗೂ 36 ಶಾಸಕರು ಮಾತ್ರ ಇದ್ದರು. ಭೋಜನ ವಿರಾಮದ ನಂತರವೂ ಮುಕ್ಕಾಲು ಗಂಟೆ ತಡವಾಗಿ ಕಲಾಪ ಆರಂಭವಾಯಿತು.

ಮೊದಲ ಎರಡು ಸಾಲಿನಲ್ಲಿ ಸಚಿವರು ಇರಲಿಲ್ಲ. ಮೂರನೇ ಸಾಲಿನಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾತ್ರ ಕುಳಿತಿದ್ದರು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಭಾಷಣ ಮುಂದುವರಿಸಿದರು.

ADVERTISEMENT

‘ಸಚಿವರೇ ಇಲ್ಲ, ಯಾರನ್ನು ಉದ್ದೇಶಿಸಿ ಭಾಷಣ ಮಾಡುತ್ತೀರಿ. ಸಚಿವರಿಗೆ ಆಸಕ್ತಿ ಇಲ್ಲದಿದ್ದರೆ ಹೇಗೆ’ ಎಂದು ಬಿಜೆಪಿಯ ಡಿ.ಎನ್. ಜೀವರಾಜ್ ಪ್ರಶ್ನಿಸಿದರು.

‘ಆಧುನಿಕ ಅಂಬೇಡ್ಕರ್‌, ನೀವು ಪೂಜಿಸುವ ಹನುಮನ ಹೆಸರಿನ ಆಂಜನೇಯ ಇದ್ದಾರಲ್ಲ. ಸಾಕು ಬಿಡಿ’ ಎಂದು ರಾಜಣ್ಣ ಚಟಾಕಿ ಹಾರಿಸಿದರು. ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಹೆಸರುಗಳನ್ನು ಆಗ ಸಭಾಧ್ಯಕ್ಷ ಕೋಳಿವಾಡ ಓದಿದರು. ಇರಬೇಕಾದ ಸಚಿವರು ಒಬ್ಬರೂ ಸದನದಲ್ಲಿ ಇಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಅದಾದ 15 ನಿಮಿಷದ ಬಳಿಕ ಸಚಿವರಾದ ರಾಮಲಿಂಗಾರೆಡ್ಡಿ, ವಿನಯ ಕುಲಕರ್ಣಿ ಸದನಕ್ಕೆ ಬಂದರು.

ಪರಿಷತ್ತಿನಲ್ಲೂ ಸದಸ್ಯರು, ಸಚಿವರ ಗೈರು:

ವಿಧಾನಪರಿಷತ್ತಿನಲ್ಲೂ ಭೋಜನ ವಿರಾಮದ ಬಳಿಕ ಸದಸ್ಯರು, ಸಚಿವರು ಮತ್ತು ಅಧಿಕಾರಿಗಳ ಸಂಖ್ಯೆ ಕಡಿಮೆ ಇತ್ತು. ಕಲಾಪದಲ್ಲಿ ಹಾಜರಿರಲೇಬೇಕಿದ್ದ ಸಚಿವರು ಮತ್ತು ಅಧಿಕಾರಿಗಳ ಇಲ್ಲದೇ ಇರುವುದರ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಆಕ್ಷೇಪಿಸಿದರು.

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಮಾತನಾಡಿ, ‘ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆಯುವಾಗ ಇರಬೇಕಿದ್ದ ಸಚಿವರು ಹಾಜರಿಲ್ಲ. ಅಧಿಕಾರಿಗಳೂ ಇಲ್ಲ. ಅಧಿಕಾರಿಗಳು ರೇಸ್‌ಕೋರ್ಸ್‌ಗೆ ಹೋಗುತ್ತಾರಾ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಗಣೇಶ್‌ ಕಾರ್ಣಿಕ್‌ ಮಧ್ಯ ಪ್ರವೇಶಿಸಿ, ಸಭಾನಾಯಕ ಸೀತಾರಾಂ ಹೊರತುಪಡಿಸಿ ಯಾವ ಸಚಿವರೂ ಹಾಜರಿಲ್ಲ. ಕಲಾಪ ಪಟ್ಟಿಯಲ್ಲಿ ಹೆಸರಿರುವ ಯಾವ ಸಚಿವರೂ ಇಲ್ಲ ಎಂದರು.

ಆಗ ಹಿಂದಿನ ಸಾಲಿನಲ್ಲಿದ್ದ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮತ್ತು ಮೊಗಸಾಲೆಯಲ್ಲಿದ್ದ ಸಚಿವರಾದ ಆರ್.ಬಿ. ತಿಮ್ಮಾಪೂರ ಮತ್ತು ಈಶ್ವರ ಖಂಡ್ರೆ ಸದನಕ್ಕೆ ದೌಡಾಯಿಸಿದರು. ‘ಸಚಿವರು ಮತ್ತು ಅಧಿಕಾರಿಗಳು ಬರದಿದ್ದರೆ ನಾವಿಲ್ಲಿ ತೌಡು ಕುಟ್ಟಬೇಕೆ’ ಎಂದು ಉಗ್ರಪ್ಪ ಪ್ರಶ್ನಿಸಿದರು.

‘ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಇರಬೇಕಿತ್ತು. ಅವರೂ ಇಲ್ಲ. ಹೀಗೆ ಗೈರು ಹಾಜರಾಗುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ರೂಪಿಸಬೇಕು ಎಂದು ಸಭಾಪತಿ ಪೀಠದಲ್ಲಿದ್ದ ರಾಮಚಂದ್ರಗೌಡ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.