ADVERTISEMENT

ಕೆಎಸ್‌ಒಯು ವಿದ್ಯಾರ್ಥಿಗಳ ‘ನೋಟಾ’ ಪ್ರಚಾರ

ನೇಸರ ಕಾಡನಕುಪ್ಪೆ
Published 8 ಫೆಬ್ರುವರಿ 2018, 10:48 IST
Last Updated 8 ಫೆಬ್ರುವರಿ 2018, 10:48 IST
ಕೆಎಸ್‌ಒಯು ವಿದ್ಯಾರ್ಥಿಗಳ ‘ನೋಟಾ’ ಪ್ರಚಾರ
ಕೆಎಸ್‌ಒಯು ವಿದ್ಯಾರ್ಥಿಗಳ ‘ನೋಟಾ’ ಪ್ರಚಾರ   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ (ಕೆಎಸ್‌ಒಯು) ಯುಜಿಸಿ ಮಾನ್ಯತೆಗಾಗಿ ನಿರಂತರ ಹೋರಾಟ ನಡೆಸಿರುವ ವಿದ್ಯಾರ್ಥಿಗಳು ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗೂ ಮತ ಹಾಕದೇ ಇರಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಕೆಎಸ್‌ಒಯು ವಿದ್ಯಾರ್ಥಿಗಳಿದ್ದಾರೆ. ದೇಶದಾದ್ಯಂತ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಮಾನ್ಯತೆ ದೊರಕಿಸಿಕೊಡುವಂತೆ ರಾಜಕಾರಣಿಗಳ ಬಳಿ ಮೊರೆಯಿಟ್ಟು ಸಾಕಾಗಿದೆ. ನಮ್ಮ ಸಮಸ್ಯೆಗೆ ಸ್ಪಂದಿಸದ ಈ ರಾಜಕಾರಣಿಗಳಿಗೇಕೆ ಮತ ಹಾಕಬೇಕು. ಮತದಾನದ ವೇಳೆ ‘ನೋಟಾ’ ಗುಂಡಿ ಒತ್ತುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ಪಟ್ಟಿ ಸಂಗ್ರಹ: ಕೆಎಸ್‌ಒಯು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲೇ ಇದ್ದರೂ ವಿವಿಧೆಡೆ ಹರಿದು ಹಂಚಿಹೋಗಿದ್ದಾರೆ. ಹಾಗಾಗಿ ಎಲ್ಲರನ್ನು ಒಂದು ವೇದಿಕೆಯಡಿ ಸೇರಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಟ್ವಿಟರ್, ವಾಟ್ಸ್‌ಆ್ಯಪ್‌ ಮೂಲಕ ಪ್ರಚಾರ ಶುರುವಾಗಿದೆ.

ADVERTISEMENT

ಇದಕ್ಕಾಗಿ ಅರ್ಜಿಯೊಂದನ್ನು ರಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಈ ಅರ್ಜಿಗಳನ್ನು ವಿದ್ಯಾರ್ಥಿಗಳು ತುಂಬಿ ಕಳುಹಿಸುವಂತೆ ಕೋರಲಾಗಿದೆ. ಮತದಾನಕ್ಕೆ ಒಂದು ತಿಂಗಳ ಮುನ್ನ ಒಂದೆಡೆ ಸೇರಿಸಿ ‘ನೋಟಾ’ ಬಳಕೆ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಅವರ ಕುಟುಂಬ ವರ್ಗದವರೂ ಮತ ಹಾಕದಂತೆ ಪ್ರೇರೇಪಿಸಲಾಗುತ್ತಿದೆ.

‘ನಾವು ಟ್ವಿಟರ್‌ ಹಾಗೂ ವಾಟ್ಸ್‌ಆ್ಯಪ್ ಅನ್ನು ಬಳಸಿಕೊಳ್ಳುತ್ತಿದ್ದೇವೆ. ಒಟ್ಟು 30 ಮಂದಿ ಈ ಆಂದೋಲನಕ್ಕೆ ಚಾಲನೆ ಕೊಟ್ಟಿದ್ದೇವೆ. ರಾಜ್ಯದ ಎಲ್ಲ ಭಾಗಗಳಲ್ಲಿ ಕೆಎಸ್‌ಒಯು ವಿದ್ಯಾರ್ಥಿಗಳಿದ್ದಾರೆ. ಯಾವ ಪಕ್ಷದ ಯಾವ ಅಭ್ಯರ್ಥಿಗೂ ಮತ ಹಾಕದಂತೆ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ವಿದ್ಯಾರ್ಥಿ ಮುಖಂಡ ಲೋಹಿತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ದಯಾಮರಣಕ್ಕೂ ಕೋರಿಕೆ: ‘ಇದೇ ಅಭಿಯಾನದ ಭಾಗವಾಗಿ ರಾಷ್ಟ್ರಪತಿಗೆ ಸಾಮೂಹಿಕ ದಯಾಮರಣಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಮಾರ್ಚ್‌ 2ನೇ ವಾರದಲ್ಲಿ ಎಲ್ಲ ವಿದ್ಯಾರ್ಥಿಗಳ ಅರ್ಜಿಗಳು ಕೈ ಸೇರುತ್ತವೆ. ನಂತರ ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆಯುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.