ADVERTISEMENT

ಡೀಮ್ಡ್‌ ಅರಣ್ಯ: ರೈತರಿಗೆ ಸಮಸ್ಯೆ ಆಗದಂತೆ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಸಚಿವ ಬಿ.ರಮಾನಾಥ ರೈ
ಸಚಿವ ಬಿ.ರಮಾನಾಥ ರೈ   

ಬೆಂಗಳೂರು: ‘ಡೀಮ್ಡ್‌ ಅರಣ್ಯಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳುವಾಗ ಈ ಪ್ರದೇಶದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿರುವ ಕೃಷಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಬುಧವಾರ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಅವರು ಉತ್ತರಿಸಿದರು.

ಡೀಮ್ಡ್‌ ಅರಣ್ಯ ವ್ಯಾಪ್ತಿಯಿಂದ ಕೈಬಿಡುವ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡದೇ, ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಕಾಯ್ದಿರಿಸುವುದಾಗಿ ಲಖಿತ ಉತ್ತರದಲ್ಲಿ ತಿಳಿಸಿದ್ದೀರಿ. ಹಾಗಾದರೆ ಈ ಪ್ರದೇಶದಲ್ಲಿ ಅನಧಿಕೃತವಾಗಿ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೆ ಯಾವ ರೀತಿ ನ್ಯಾಯ ಒದಗಿಸಿದಂತಾಗುತ್ತದೆ ಎಂದು ‍ಪೂಜಾರಿ ಪ್ರಶ್ನಿಸಿದರು.

ADVERTISEMENT

ಗೊಂದಲ ಮೂಡಿಸುವಂತಿರುವ ಲಿಖಿತ ಉತ್ತರವನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

‘ಸಚಿವ ಸಂಪುಟದಲ್ಲಿ ತೀರ್ಮಾನವಾದ ವಿಷಯವನ್ನು ಉತ್ತರದಲ್ಲಿ ತಿಳಿಸಿದ್ದೇನೆ. ಜಿಲ್ಲಾ ಮಟ್ಟದ ಸಮಿತಿಯು ಅಂತಿಮಗೊಳಿಸಿರುವ ಡೀಮ್ಡ್‌ ಅರಣ್ಯದ ವ್ಯಾಪ್ತಿಯಲ್ಲಿ ಕೆಲವೊಂದು ನ್ಯೂನತೆಗಳಿವೆ. ಈ ಬಗ್ಗೆ ಇನ್ನೊಮ್ಮೆ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಜನರಿಗೆ ನಿವೇಶನ ನೀಡುವುದು ಕೂಡಾ ಸಾರ್ವಜನಿಕ ಉದ್ದೇಶದ ವ್ಯಾಪ್ತಿಯಲ್ಲೇ ಬರುತ್ತದೆ’ ಎಂದು ಸಚಿವ ರೈ ತಿಳಿಸಿದರು.

‘ಕಾನ, ಬಾನ, ಕುಮ್ಕಿ ಸೊಪ್ಪಿನಗುಡ್ಡಗಳೂ ಈ ಹಿಂದೆ ಡೀಮ್ಡ್‌ ಅರಣ್ಯದ ವ್ಯಾಪ್ತಿಗೆ ಸೇರಿದ್ದವು. ಇಂತಹ ಕಡೆ ಸಾಗುವಳಿ ಮಾಡಿರುವವರಿಗೆ ಹಕ್ಕುಪತ್ರ ಒದಗಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಆದರೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಅಂಕಿ ಅಂಶ

9.95 ಲಕ್ಷ ಹೆಕ್ಟೇರ್‌ -ರಾಜ್ಯದಲ್ಲಿರುವ ಡೀಮ್ಡ್‌ ಅರಣ್ಯದ ಒಟ್ಟು ವಿಸ್ತೀರ್ಣ

3.95 ಲಕ್ಷ ಹೆಕ್ಟೇರ್‌ -ಜಿಲ್ಲಾ ಸಮಿತಿ ಪ್ರಕಾರ ಡೀಮ್ಡ್‌ ಅರಣ್ಯದ ವಿಸ್ತೀರ್ಣ

3.30 ಲಕ್ಷ ಹೆಕ್ಟೇರ್‌ -ಸಂಪುಟ ಅಂತಿಮಗೊಳಿದ ಡೀಮ್ಡ್‌ ಅರಣ್ಯದ ವಿಸ್ತೀರ್ಣ

1,73 ಲಕ್ಷ ಹೆಕ್ಟೇರ್‌ -ಸಾರ್ವಜನಿಕ ಉದ್ದೇಶಕ್ಕೆ ಬಳಸಲು ತೀರ್ಮಾನಿಸಿದ ಡೀಮ್ಡ್‌ ಅರಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.