ADVERTISEMENT

‘ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ನೆಲಸಮ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST

ಬೆಂಗಳೂರು: ‘ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ನೆಲಸಮಗೊಳಿಸಲು ಈಗಾಗಲೇ ಆದೇಶ ನೀಡಿದ್ದೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಡಿ.ಎನ್‌. ಜೀವರಾಜ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೊಸ ಕೊಠಡಿಗಳ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ಆಯವ್ಯಯದಲ್ಲಿ ಈ ಬಗ್ಗೆ ಘೋಷಿಸಲಾಗುವುದು’ ಎಂದರು.

‘ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಷ್ಟೆ ಅಲ್ಲ, ರಾಜ್ಯದ ಹಲವು ಕಡೆ ಶಾಲಾ ಕಟ್ಟಡಗಳು ಕುಸಿಯುವ ಸ್ಥಿತಿಯಲ್ಲಿವೆ. ಹೀಗಾದರೆ‌, ಈ ಶಾಲೆಗಳಿಗೆ ಮಕ್ಕಳು ಹೋಗುವುದಾದರೂ ಹೇಗೆ? ಎಂದು ಜೀವರಾಜ್‌ ಪ್ರಶ್ನಿಸಿದರು.

ADVERTISEMENT

‘ಸರ್ವಶಿಕ್ಷಣ ಅಭಿಯಾನದಡಿ ಕೇಂದ್ರದಿಂದ ₹1,631 ಕೋಟಿ ಬರಬೇಕಿದೆ. ಅದರಲ್ಲಿ ಈವರೆಗೆ ₹431 ಕೋಟಿ ಬಂದಿದೆ. ಈ ವರ್ಷ ₹566.45 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಸಚಿವರು ವಿವರಿಸಿದರು.

ಇದರ ಜತೆಗೆ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಲ್ಲಿ ಉಳಿಕೆಯಾದ ₹243 ಕೋಟಿಯನ್ನೂ ಇದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಆದೇಶಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.