ADVERTISEMENT

‘ಹೊಟ್ಟೆಕಿಚ್ಚು ಧರ್ಮವಾಗಿದೆ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
‘ಹೊಟ್ಟೆಕಿಚ್ಚು ಧರ್ಮವಾಗಿದೆ’
‘ಹೊಟ್ಟೆಕಿಚ್ಚು ಧರ್ಮವಾಗಿದೆ’   

ಹರಿಹರ: ಶುದ್ಧ ಅಂತಃಕರಣ, ಮರುಕ, ದಯೆಯೇ ಧರ್ಮ ಎಂದು ಬಸವಣ್ಣನವರು ವಿಶ್ಲೇಷಿಸಿದ್ದರು. ಆದರೆ ಈಗ  ದುರದೃಷ್ಟವಶಾತ್‌  ಹೊಟ್ಟೆಕಿಚ್ಚುಪಡುವುದೇ ಧರ್ಮವಾಗಿದೆ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೆಳ್ಳೂಡಿಯಲ್ಲಿ ಗುರುವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ರಜತ ಮಹೋತ್ಸವ ಸಮಾರಂಭದ  ಭಾವೈಕ್ಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತಿ ಬೆಳೆಸುವ ಜವಾಬ್ದಾರಿ ಮಠಗಳ ಮೇಲಿದೆ. ಕರ್ನಾಟಕದ ಮಠಗಳು ಅವುಗಳನ್ನು ನಿರ್ವಹಿಸುತ್ತ ಬಂದಿವೆ ಎಂದು ಅಭಿಪ್ರಾಯಪಟ್ಟರು.

‘ಕನಕದಾಸರು ಒಳ್ಳೊಳ್ಳೆ ಕೀರ್ತನೆಗಳನ್ನು ಬರೆದಿದ್ದಾರೆ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಅವರು ಆಗ ಬರೆದಿದ್ದರು. ಈಗೇನಾದರೂ ಕನಕದಾಸರು ಬದುಕಿದ್ದಲ್ಲಿ ಇವತ್ತಿನ ಪರಿಸ್ಥಿತಿ ನೋಡಿ ಎಲ್ಲಾರು ಮಾಡುವುದು ಓಟಿಗಾಗಿ ಮತ್ತು ನೋಟಿಗಾಗಿ.. ಎಂದು ಬದಲಾಯಿಸುತ್ತಿದ್ದರೇನೊ. ಇನ್ನೇನು ಚುನಾವಣೆ ಬಂದಿದೆ. ಎಲ್ಲರ ಹಣೆಬರಹ ಭಕ್ತರ ಕೈಲಿದೆ. ಮಠಾಧೀಶರು, ಶಾಸಕರು, ಮಂತ್ರಿಗಳನ್ನು ವೇದಿಕೆ ಮೇಲೆ ಕೂರಿಸೋರು ನೀವೇ, ಇಳಿಸೋರೂ ನೀವೇ’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

‘ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಿಚಾರವಾದಿ, ನಿಷ್ಠುರವಾದಿ. ಆದರೆ ನಿಷ್ಠುರತೆಯ ಹಿಂದೆ ಸಮಾಜದ ಬಗ್ಗೆ ಅವರ ಕಾಳಜಿ ಇದೆ ಎನ್ನುವುದನ್ನು ಮನಗಾಣಬೇಕು’ ಎಂದು ಶ್ರೀಗಳು ಹೇಳಿದರು.

ನಿರಂಜನಾನಂದಪುರಿ ಸ್ವಾಮೀಜಿ, ಕೆಲ್ಲೋಡು ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ತಿಂಥಣಿ ಶಾಖಾ ಮಠದ ಸಿದ್ದರಾಮನಂದ
ಪುರಿ ಸ್ವಾಮೀಜಿ, ಕೆ.ಆರ್‌.ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ.ಜಿ.ಗೋವಿಂದಪ್ಪ ಮತ್ತು ಸಮಾಜದ ಗಣ್ಯರು ವೇದಿಕೆಯಲ್ಲಿದ್ದರು.

ಶುಕ್ರವಾರ ನಡೆಯುವ ರಜತಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಐಎಎಸ್‌– ಕೆಎಎಸ್‌ ತರಬೇತಿ ಕೇಂದ್ರದ ಲೋಕಾರ್ಪಣೆ ಕೂಡ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.