ADVERTISEMENT

ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ ರೇವಣ್ಣ

ದೇವೇಗೌಡರಿಗೆ ಮಾತನಾಡಲು ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ ರೇವಣ್ಣ
ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ ರೇವಣ್ಣ   

ಬೆಂಗಳೂರು: ‘ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ ಮತ್ತು ಉದ್ದೇಶಪೂರ್ವಕವಾಗಿ ನನ್ನ ಹೆಸರು ಹೇಳಿಲ್ಲ. ಇದರಿಂದ ಹಕ್ಕುಚ್ಯುತಿಯಾಗಿದೆ’ ಎಂದು ಜೆಡಿಎಸ್‌ನ ಎಚ್.ಡಿ. ರೇವಣ್ಣ ಗುರುವಾರ ವಿಧಾನಸಭೆಯಲ್ಲಿ ಪ್ರಸ್ತಾವ ಮಂಡಿಸಿದರು.

ರೇವಣ್ಣ ಅವರ ಜೊತೆ ಜೆಡಿಎಸ್‌ನ ಇತರ ಸದಸ್ಯರು ಹಕ್ಕುಚ್ಯುತಿ ಸಮಿತಿಗೆ ಈ ಪ್ರಸ್ತಾವ ಕಳುಹಿಸಬೇಕು ಎಂದು ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದ ಸಭಾಧ್ಯಕ್ಷ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಎನ್‌.ಎಚ್‌. ಶಿವಶಂಕರ ರೆಡ್ಡಿ, ಪ್ರಸ್ತಾಪವನ್ನು ಹಕ್ಕು ಬಾಧ್ಯತಾ ಸಮಿತಿಗೆ ವರ್ಗಾಯಿಸಲು ರೂಲಿಂಗ್ ನೀಡಿದರು.

ಸಚಿವ ಕಾಗೋಡು ತಿಮ್ಮಪ್ಪ, ‘ಈ ಕುರಿತು ಜಿಲ್ಲಾಧಿಕಾರಿಯಿಂದ ವರದಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು’ ಎಂದಾಗ ವಿರೋಧ ಪಕ್ಷದ ನಾಯಕ ಶೆಟ್ಟರ್, ‘ಮೇಲ್ನೋಟಕ್ಕೆ ಹಕ್ಕು ಚ್ಯುತಿ ಆಗಿದೆ. ಹಕ್ಕು ಬಾಧ್ಯತಾ ಸಮಿತಿಗೆ ಇದನ್ನು ವರ್ಗಾಯಿಸಬೇಕು’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಬಿಜೆಪಿಯ ಆರ್. ಅಶೋಕ, ಸಿ.ಟಿ. ರವಿ, ಅಪ್ಪಚ್ಚು ರಂಜನ್‌ ರೇವಣ್ಣ ಬೆಂಬಲಕ್ಕೆ ನಿಂತರು.

ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಶಿವಶಂಕರ ರೆಡ್ಡಿ, ‘ಜಿಲ್ಲಾಧಿಕಾರಿಯಿಂದ ವರದಿ ಪಡೆಯಲು ಸಭಾಧ್ಯಕ್ಷರು ಈಗಾಗಲೇ ಸೂಚಿಸಿದ್ದಾರೆ’ ಎಂದರೂ ಸಮಾಧಾನಗೊಳ್ಳದ ಜೆಡಿಎಸ್‌ ಸದಸ್ಯರು, ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಲು ಮುಂದಾದರು.

‘ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆಯಲ್ಲೇ ಹೀಗಾದರೆ ಹೇಗೆ’ ಎಂದು ಸಿ.ಟಿ.ರವಿ ಪ್ರಶ್ನಿಸಿದರು.

‘ರಾಷ್ಟ್ರಪತಿಯವರ ಪ್ರತಿಯೊಂದು ನಿಮಿಷದ ಕಾರ್ಯಕ್ರಮವೂ ರಾಷ್ಟ್ರಪತಿ ಭವನದಲ್ಲಿ ನಿರ್ಧಾರವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳುತ್ತಿದ್ದಂತೆ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರೇವಣ್ಣ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.