ADVERTISEMENT

‘ಮೋದಿಗೆ ಜೀ ಹುಜೂರ್‌ ಎನ್ನದಿದ್ದರೆ ಉಳಿಗಾಲ ಇಲ್ಲ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
‘ಮೋದಿಗೆ ಜೀ ಹುಜೂರ್‌ ಎನ್ನದಿದ್ದರೆ ಉಳಿಗಾಲ ಇಲ್ಲ’
‘ಮೋದಿಗೆ ಜೀ ಹುಜೂರ್‌ ಎನ್ನದಿದ್ದರೆ ಉಳಿಗಾಲ ಇಲ್ಲ’   

ಬೆಂಗಳೂರು: ‘ಮೋದಿಗೆ ಜೀ ಹುಜೂರ್‌ ಎನ್ನದಿದ್ದರೆ ಯಾರಿಗೂ ಉಳಿಗಾಲ ಇಲ್ಲ ಎಂಬ ಸ್ಥಿತಿ ಬಿಜೆಪಿಯಲ್ಲಿದೆ’ ಎಂದು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ ಸಿ.ಎಚ್‌. ವಿಜಯಶಂಕರ್ ವಾಗ್ದಾಳಿ ನಡೆಸಿದರು.

‘ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಉಳಿದಿಲ್ಲ. ಯಡಿಯೂರಪ್ಪನವರಂಥ ಹಿರಿಯ ನಾಯಕರು ಅಮಿತ್ ಶಾ ಮುಂದೆ ಮಂಡಿ ಊರುತ್ತಾರೆ. ಕಾಲು ಮುಟ್ಟಿ ನಮಸ್ಕರಿಸುತ್ತಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ವ್ಯಂಗ್ಯವಾಡಿದರು.

‘ಈ ವಿಷಯ ಆ ಪಕ್ಷದ ಅನೇಕ ಕಾರ್ಯಕರ್ತರಿಗೆ ಗೊತ್ತಿದೆ. ಆದರೆ, ಯಾರೂ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ’ ಎಂದರು.

ADVERTISEMENT

‘ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಮೋದಿ ಸಂಪುಟದ ಸಹೋದ್ಯೋಗಿ ಅನಂತ್‌ ಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಿಸಬೇಕು ಎಂದು ಹೇಳುತ್ತಾರೆ. ಆದರೆ, ಬಿಜೆಪಿಯ ಯಾರಿಗೂ ಅದು ತಪ್ಪು ಎನಿಸಲಿಲ್ಲ. ಹೆಗಡೆ ಹೇಳಿರುವುದೇ ಮೋದಿ ಮನಸ್ಸಿನಲ್ಲಿದೆ ಅನಿಸುತ್ತದೆ’ ಎಂದರು.

‘ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಮತ ನೀಡಿ ಎಂದು ಹೇಳಿದ್ದ ಮೋದಿ, ಈಗ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಮತ ನೀಡಿ ಎಂದು ಹೇಳುತ್ತಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆ ಮೇಲೆ ಪ್ರಧಾನಿಗೆ ನಂಬಿಕೆ ಇಲ್ಲ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ವಾಜಪೇಯಿ, ಅಡ್ವಾಣಿ ಭಾವಚಿತ್ರ ಬಿಜೆಪಿಯವರ ಬಳಿ ಕಾಣಿಸುತ್ತಿಲ್ಲ. ಇಂಥ ನಾಯಕರನ್ನು ರಾಜಕೀಯವಾಗಿ ಮುಗಿಸಿ ಮೂಲೆಗುಂಪು ಮಾಡಲಾಗಿದೆ. ದೇಶದಲ್ಲಿ ಮುಂದೆ ತುರ್ತುಪರಿಸ್ಥಿತಿ ಬಂದರೆ ಆಶ್ಚರ್ಯ ಇಲ್ಲ ಎಂದು ಅಡ್ವಾಣಿಯವರೇ ಹೇಳಿದ್ದರು’ ಎಂದು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.