ADVERTISEMENT

ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾಗೆ ಒತ್ತಾಯಿಸಿ ಫೆ.23ಕ್ಕೆ ಸಂಸತ್‌ ಮುತ್ತಿಗೆ

ರಾಷ್ಟ್ರೀಯ ಕಿಸಾನ್‌ ಮಹಾಸಂಘದಿಂದ ರಸ್ತೆ ತಡೆ–ಜೈಲ್‌ ಭರೋ ಚಳವಳಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:36 IST
Last Updated 9 ಫೆಬ್ರುವರಿ 2018, 9:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ದೇಶದ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ, ರಾಷ್ಟ್ರೀಯ ಕಿಸಾನ್‌ ಮಹಾಸಂಘ ಫೆ. 23ರಂದು ದೆಹಲಿಯಲ್ಲಿ ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

‘ರಾಷ್ಟ್ರೀಯ ಕಿಸಾನ್‌ ಮಹಾಸಂಘದ ನೇತೃತ್ವದಲ್ಲಿ ದೇಶದ 72 ರೈತ ಸಂಘಟನೆಗಳ ಲಕ್ಷಾಂತರ ರೈತರು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲಿದ್ದು, ಅಂದು (ಫೆ. 23) ಕರ್ನಾಟಕದ ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಚಳವಳಿಯನ್ನು ಬೆಂಬಲಿಸಲಿದ್ದಾರೆ’ ಎಂದು ರಾಜ್ಯ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ ಶಾಂತಕುಮಾರ್‌ ತಿಳಿಸಿದರು.

‘ದೇಶದ ಎಲ್ಲ ದಿಕ್ಕುಗಳಿಂದ ಅಂದು ರೈತರು ಸಂಸತ್‌ ಭವನಕ್ಕೆ ತೆರಳಲಿದ್ದಾರೆ. ರಾಜ್ಯದ ರೈತರಿಗೆ ದೆಹಲಿ ತುಂಬಾ ದೂರವಾಗುವ ಕಾರಣ, ಇಲ್ಲಿಯೇ ರಸ್ತೆ ತಡೆ ನಡೆಸಿ ಪ್ರತಿಭಟಿಸಲಿದ್ದಾರೆ. ಪೊಲೀಸರು ಹೋರಾಟ ತಡೆದರೆ, ಜೈಲಿಗೆ ಹೋಗಲೂ ಸಿದ್ಧವಿದ್ದೇವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಡಾ.ಎಂ.ಎಸ್.ಸ್ವಾಮಿನಾಥನ್‌ ವರದಿಯಂತೆ, ರೈತರ ಉತ್ಪನ್ನಗಳಿಗೆ ನ್ಯಾಯಯುತ, ಲಾಭದಾಯಕ ಬೆಂಬಲ ಬೆಲೆ ನಿಗದಿ ಪಡಿಸಬೇಕು’ ಎಂದ ಅವರು, ‘25 ವರ್ಷಗಳಲ್ಲಿ ರೈತರ ಆದಾಯ ಕೇವಲ 0.50ರಷ್ಟು ಏರಿಕೆಯಾಗಿದೆ. ಆದರೆ, ಶಾಸಕ ಹಾಗೂ ಸಂಸದರ ಆದಾಯ ಸಾವಿರಾರು ಪಟ್ಟು ಏರಿಕೆಯಾಗಿದೆ. ಅಲ್ಲದೆ, ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸಿನಂತೆ ಲಕ್ಷ ಪಟ್ಟು ಹೆಚ್ಚಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಕ್ಕರೆ ಕಾರ್ಖಾನೆಗಳು ರೈತರನ್ನು ಹಲವು ರೀತಿಯಲ್ಲಿ ವಂಚಿಸುತ್ತಿವೆ. ಕಬ್ಬಿಗೆ ನ್ಯಾಯಯುತ ದರ ನಿಗದಿಮಾಡಲು ರಾಜ್ಯಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗುಜರಾತ್‌ನಲ್ಲಿ ಟನ್‌ ಕಬ್ಬಿಗೆ ₹4,500 ರೈತರಿಗೆ ಪಾವತಿಸಲಾಗುತ್ತಿದೆ ಎಂದು ವರದಿ ಸಲ್ಲಿಸಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಹೇಳಿದರು.

ಆದೇಶ ಜಾರಿಯಾಗಿಲ್ಲ: ‘ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಮಾಡಿಕೊಳ್ಳಬೇಕು ಹಾಗೂ ಕಬ್ಬು ಕಟಾವು ಕೂಲಿ ಮತ್ತು ಸಾಗಾಣಿಕೆ ವೆಚ್ಚ ನಿರ್ಧರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇದನ್ನು ಯಾವುದೇ ಕಾರ್ಖಾನೆಗಳು ಪಾಲಿಸುತ್ತಿಲ್ಲ. ಆಯಾ ಜಿಲ್ಲಾಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಶಾಂತಕುಮಾರ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.