ADVERTISEMENT

ಮೂವರು ಮಹಿಳಾ ಅಧಿಕಾರಿಗಳ ವಿರುದ್ಧ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST

ಬೆಂಗಳೂರು: ವಿಧಾನಮಂಡಲ ಗ್ರಂಥಾಲಯ ವಿಭಾಗದ ನಿರ್ದೇಶಕಿ ಎಂ.ಕೆ.ವಿಶಾಲಾಕ್ಷಿ, ಜಂಟಿ ಕಾರ್ಯದರ್ಶಿ ಕೆ.ಕೆ ಇಂದಿರಾ ಮತ್ತು ಮುಖ್ಯ ಗ್ರಂಥಪಾಲಕಿ ಅನಸೂಯ ಎನ್‌. ದೇವಗಿರಿ ವಿರುದ್ಧ ಕರ್ತವ್ಯ ಲೋಪ ಆರೋಪ ಕುರಿತು ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡಲಾಗಿದೆ.

ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಿ.ಹಿರೇಮಠ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ವಿಧಾನಸಭೆ ಸಚಿವಾಲಯ ಆದೇಶ ಹೊರಡಿಸಿದೆ.

ಈ ಮೂವರು ಅಧಿಕಾರಿಗಳು ತಮಗೆ ಹಂಚಿಕೆ ಮಾಡಿದ್ದ ಕರ್ತವ್ಯಗಳಲ್ಲಿ ಲೋಪ ಎಸಗಿದ್ದಾರೆ. ಈ ಸಂಬಂಧ ಅವರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಅದಕ್ಕೆ ನೀಡಿರುವ ವಿವರಣೆಗಳು ಸಮರ್ಪಕವಾಗಿಲ್ಲ. ಆದ ಕಾರಣ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಆದೇಶ ತಿಳಿಸಿದೆ.

ADVERTISEMENT

ಆರೋಪ ಏನು?:

ವಿಧಾನಮಂಡಲದ ಗ್ರಂಥಾಲಯಕ್ಕೆ ಹೊಸದಾಗಿ ಖರೀದಿಸಿದ ‘ನ್ಯೂ ಜೆನ್‌ ಲಿಬ್‌ ಲೈಬ್ರರಿ ಸಾಫ್ಟ್‌ವೇರ್‌’ ಬಳಸದೇ, ಇ–ಗ್ರಂಥಾಲಯ ಕಾರ್ಯ ಸ್ಥಗಿತಗೊಳ್ಳಲು ಮೂವರು ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.

‘ಈ ಅಧಿಕಾರಿಗಳು ವಿಧಾನಮಂಡಲ ಗ್ರಂಥಾಲಯವನ್ನು ಇ– ಗ್ರಂಥಾಲಯವನ್ನಾಗಿ ಮಾರ್ಪಡಿಸುವ ಕಾರ್ಯದಲ್ಲಿ ಆಸಕ್ತಿ ತೆಗೆದುಕೊಂಡಿಲ್ಲ. ಮುಖ್ಯ ಗ್ರಂಥಪಾಲಕರು ಹಾಗೂ ಗ್ರಂಥಾಲಯ ಶಾಖೆ ಮೇಲುಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ತಮ್ಮ ಶಾಖೆಗಳ ನಿರ್ವಹಣೆಗೆ ಪ್ರಗತಿ ಪರಿಶೀಲನೆ ನಡೆಸಿಲ್ಲ.  ಅಲ್ಲದೆ, ಇ– ಉನ್ನತೀಕರಣ ವಿಷಯದ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಿಸ್ಟಂ ಮ್ಯಾನೇಜರ್‌ ವರದಿ ನೀಡಿದ್ದಾರೆ. ಇದನ್ನು ಗಂಭೀರ ಕರ್ತವ್ಯ ಲೋಪ ಎಂದು ಪರಿಗಣಿಸಲಾಗಿದೆ. ಈ ಸಂಬಂಧ ಸತ್ಯಾಸತ್ಯತೆ ಕಂಡುಕೊಳ್ಳಲು ಇಲಾಖೆ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ನೇಮಿಸಲಾಗಿದೆ ಎಂದು ಆದೇಶ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.