ADVERTISEMENT

ಹೂಮಾಲೆಯಲ್ಲಿ ಜೋಕಾಲೆಯಾಡಿದ!

ಪ್ರವೀಣ ಕುಲಕರ್ಣಿ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

ವಿಂಧ್ಯಗಿರಿ (ಶ್ರವಣಬೆಳಗೊಳ): ‘ಮಜ್ಜನ ಮುಗಿಸಿದ ಗೊಮ್ಮಟಪ್ಪ ಈಗ ಹೂಮಾಲೆಯಲ್ಲಿ ಜೋಕಾಲಿ ಆಡುತ್ತಿದ್ದಾನೆ’.

ಗೊಮ್ಮಟೇಶ್ವರ ಮೂರ್ತಿಗೆ ಸೋಮವಾರ ಅಭಿಷೇಕದ ಬಳಿಕ ಹೂಮಾಲೆಯನ್ನು ಅರ್ಪಿಸುವಾಗ ಅಟ್ಟಣಿಗೆ ಮೇಲೆ ನೆರೆದಿದ್ದ ಭಕ್ತರು, ಆ ವೈಭವವನ್ನು ಕಣ್ತುಂಬಿಕೊಂಡು ಪ್ರತಿಕ್ರಿಯಿಸಿದ ಪರಿ ಇದು.

ವಿರಾಗಿಗೆ ನಡೆಸುವ ಅಭಿಷೇಕದ ಸಡಗರ ಒಂದು ಬಗೆಯದಾದರೆ, ಹೂಮಾಲೆ ಹಾಗೂ ಮಂಗಳಾರತಿ ಸಮರ್ಪಣೆ ವೈಭೋಗವೇ ಮತ್ತೊಂದು ಬಗೆಯದು. ಹತ್ತಾರು ವಿಧದ ಹೂವುಗಳಿಂದ ಶ್ರೀಮಂತವಾಗಿದ್ದ 108 ಅಡಿಗಳ ಉದ್ದನೆಯ ಮಾಲೆ ಗೊಮ್ಮಟನ ಕಂಠವನ್ನು ಅಲಂಕರಿಸುವ ರೀತಿ ಅನನ್ಯ.

ADVERTISEMENT

58 ಅಡಿಗಳಷ್ಟು ದೊಡ್ಡ ಎತ್ತರಕ್ಕೆ ಬೆಳೆದುನಿಂತ ಗೊಮ್ಮಟನಿಗೆ ಮಾಲೆ ಹೇಗೆ ಹಾಕುತ್ತಾರೆ ಎಂಬ ಕೌತುಕವೇ? ಬಾವಿಯಿಂದ ನೀರನ್ನು ಸೇದುವಂತೆ ಮೂರ್ತಿಯ ಎಡ ಹಾಗೂ ಬಲ ಬದಿಗಳಿಂದ ಮಾಲೆಯ ಒಂದೊಂದು ತುದಿಯನ್ನು ಭುಜದವರೆಗೆ ಮೇಲಕ್ಕೆ ಎತ್ತುತ್ತಾ ಹೋಗುತ್ತಾರೆ. ಅದೇ ಕಾಲಕ್ಕೆ ಎರಡೂ ತುದಿಗಳು ಒಂದೇ ವೇಗದಲ್ಲಿ ಮೇಲಕ್ಕೆ ಬರುವಂತೆ ಎಚ್ಚರಿಕೆ ವಹಿಸುತ್ತಾರೆ.

ಹೂಮಾಲೆ ತುಂಡರಿಸಬಾರದು ಎಂಬ ಎಚ್ಚರಿಕೆಯಿಂದ ನೈಲಾನ್‌ ದಾರದಿಂದಲೇ ಅದನ್ನು ತಯಾರು ಮಾಡಲಾಗುತ್ತದೆ. ಆದರೆ, ಮೊದಲ ಎರಡು ದಿನಗಳಲ್ಲಿ ಮಾಲೆಯನ್ನು ಮೇಲೆತ್ತುವಾಗ 2–3 ಬಾರಿ ತುಂಡರಿಸಿತ್ತು. ಆಗ ಅದನ್ನು ಮತ್ತೆ ಜೋಡಿಸಿ ಮೇಲಕ್ಕೆ ಎತ್ತಲಾಗಿತ್ತು. ಸೋಮವಾರ ಮಾತ್ರ ಯಾವುದೇ ಅಡಚಣೆಯಿಲ್ಲದೆ ಹೂಮಾಲೆ ಸರಾಗವಾಗಿ ಮೂರ್ತಿಯ ಕೊರಳನ್ನು ಸೇರಿತು.

ಹೂವಿನ ಮಾಲೆಯನ್ನು ಧಾರಣೆ ಮಾಡಿದ ಮೇಲೆ ಮಂಗಳಾರತಿ ಸಮರ್ಪಣೆಯೇ ಅಭಿಷೇಕದ ಕೊನೆಯ ಹಂತ. ಬಾಹುಬಲಿಯ ನೆತ್ತಿಯ ಮೇಲಿನಿಂದ ಹೊರಚಾಚುವ ಕಬ್ಬಿಣದ ಪೈಪಿನಿಂದ ಹೊರಬರುವ ಹಗ್ಗವೊಂದು ಕೆಳಕ್ಕೆ ಇಳಿಯುತ್ತದೆ. ಆ ವೇಳೆಗೆ ಕೆಳಗೆ ದೊಡ್ಡ ಗಾತ್ರದ  ತಟ್ಟೆಯಲ್ಲಿ  ಕರ್ಪೂರದ ಆರತಿ ಸಿದ್ಧವಾಗಿರುತ್ತದೆ.

ಆರತಿ ತಟ್ಟೆಯನ್ನು ಹಗ್ಗಕ್ಕೆ ಕಟ್ಟಿದಾಗ, ಮಂಗಳಾರತಿ ತಟ್ಟೆ ಬಾಹುಬಲಿಯ ನಾಭಿಯವರೆಗೆ ಚಲಿಸುತ್ತದೆ. ಆಗ ಲೋಲಕದಂತೆ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಹೊಯ್ದಾಡುತ್ತಾ ನಡೆಯುವ ಮಂಗಳಾರತಿಯ ವೈಭವವನ್ನು ನೋಡುವುದೇ ಒಂದು ಹಬ್ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.