ADVERTISEMENT

ವಿದ್ಯುದೀಕರಣಗೊಂಡ ರೈಲ್ವೇ ಮಾರ್ಗಕ್ಕೆ ಚಾಲನೆ

ಬೆಂಗಳೂರು– ಮೈಸೂರು ಅಷ್ಟಪಥ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST
ವಿದ್ಯುದೀಕರಣಗೊಂಡ ರೈಲ್ವೇ ಮಾರ್ಗಕ್ಕೆ ಚಾಲನೆ
ವಿದ್ಯುದೀಕರಣಗೊಂಡ ರೈಲ್ವೇ ಮಾರ್ಗಕ್ಕೆ ಚಾಲನೆ   

ಮೈಸೂರು: ವಿದ್ಯುದೀಕರಣಗೊಂಡಿರುವ ಬೆಂಗಳೂರು– ಮೈಸೂರು ಜೋಡಿ ರೈಲು ಮಾರ್ಗಕ್ಕೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಸಿರುನಿಶಾನೆ ತೋರಿದರು.

ಮೈಸೂರು ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯಪುರ– ಮೈಸೂರು ನಡುವಿನ ‘ಪ್ಯಾಲೇಸ್ ಕ್ವೀನ್‌ ಹಮ್‌ಸಫರ್‌’ ನೂತನ ರೈಲಿಗೂ ಚಾಲನೆ ನೀಡಿದರು.

‘ದಶಕದ ಬೇಡಿಕೆಯಾದ ಮೈಸೂರಿಗರ ರೈಲುಮಾರ್ಗ ವಿದ್ಯುದೀಕರಣದ ಕನಸು ಈಗ ಈಡೇರಿದೆ. ಅಲ್ಲದೇ, ಉದಯಪುರ– ಮೈಸೂರು ನಡುವೆ ರೈಲು ಸಂಚಾರ ಆರಂಭವಾಗುತ್ತಿರುವುದು ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ’ ಎಂದು ಮೋದಿ ಅಭಿಪ್ರಾಯಪಟ್ಟರು.

ADVERTISEMENT

ಸ್ಯಾಟಲೈಟ್‌ ರೈಲು ನಿಲ್ದಾಣ: ಮೈಸೂರು ತಾಲ್ಲೂಕಿನ ನಾಗನಹಳ್ಳಿಯಲ್ಲಿ ಸ್ಯಾಟಲೈಟ್‌ ರೈಲು ನಿಲ್ದಾಣ ನಿರ್ಮಾಣಕ್ಕೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು ₹789.29 ಕೋಟಿಯನ್ನು ಕೇಂದ್ರ ಬಜೆಟ್‌ನಲ್ಲಿ ಮೀಸಲಿರಿಸಿದ್ದು, 347 ಎಕರೆ ಜಾಗವನ್ನು ನಿಲ್ದಾಣಕ್ಕಾಗಿ ಗುರುತಿಸಲಾಗಿದೆ. ಮೈಸೂರಿಗೆ ಹಾಲಿ 76 ರೈಲುಗಳು ಸಂಚರಿಸುತ್ತಿದ್ದು, ಭವಿಷ್ಯದಲ್ಲಿ ಈ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದರು.

ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ರೈಲ್ವೆ ಸಚಿವ ಪಿಯೂಷ್‌ ಗೋಯೆಲ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಉಪಸ್ಥಿತರಿದ್ದರು.

ಬೆಂಗಳೂರು– ಮೈಸೂರು ಅಷ್ಟಪಥ ರಸ್ತೆ

₹ 6,400 ಕೋಟಿ ವೆಚ್ಚದ ಬೆಂಗಳೂರು– ನಿಡಘಟ್ಟ– ಮೈಸೂರು ನಡುವಿನ 117 ಕಿಲೋ ಮಿಟರ್‌ ಉದ್ದದ ಅಷ್ಟಪಥ ಹೆದ್ದಾರಿ ನಿರ್ಮಾಣಕ್ಕೂ ಪ್ರಧಾನಿ ಚಾಲನೆ ನೀಡಿದರು.

ಬೆಂಗಳೂರು– ಮೈಸೂರು ರಸ್ತೆ ವಿಸ್ತರಣೆಯೂ ಬಹಳ ದಿನಗಳ ಬೇಡಿಕೆಯಾಗಿತ್ತು. ಈ ಕೆಲಸ ಪೂರ್ಣಗೊಂಡರೆ ಈ ಎರಡೂ ನಗರಗಳ ನಡುವಿನ ಸಂಚಾರ ಸುಗಮವಾಗಲಿದೆ. ಪ್ರವಾಸಿ ಕೇಂದ್ರವಾಗಿ ಬೆಳವಣಿಗೆ ಕಂಡಿರುವ ಮೈಸೂರಿಗೆ ಹೆಚ್ಚು ಅನುಕೂಲ ಆಗುತ್ತದೆ. ಇದೆಲ್ಲ ಕೇಂದ್ರ ಸರ್ಕಾರದ ಕೊಡುಗೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.