ADVERTISEMENT

ಸಂಘಪರಿವಾರ–ಕಾಂಗ್ರೆಸ್ ಸಂಸ್ಕೃತಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಬೆಂಗಳೂರು: ಸಂಘ ಪರಿವಾರ ಮತ್ತು ಕಾಂಗ್ರೆಸ್‌ ಸಂಸ್ಕೃತಿ ಕುರಿತ ಚರ್ಚೆ ವಿಧಾನಸಭೆ ಕಲಾಪಕ್ಕೆ ಮಂಗಳವಾರ ಕೆಲ ಹೊತ್ತು ರಂಗು ತಂದಿತು.

ಬಜೆಟ್‌ ಕುರಿತು ಮಾತನಾಡಿದ ಬಿಜೆಪಿಯ ಗೋವಿಂದ ಕಾರಜೋಳ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಹೊತ್ತಿನಲ್ಲಿ ಸಾಮಾಜಿಕ ಕಳಕಳಿ ಇರುವ ನಾಯಕರೊಬ್ಬರು ಅಧಿಕಾರಕ್ಕೇರಿದ್ದಾರೆ ಎಂದು ಹೊಗಳಿದ್ದೆ’ ಎಂದರು. ‘ಈಗಲೂ ಅದನ್ನೇ ಹೇಳಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

‘ಕಾಂಗ್ರೆಸ್‌ಗೆ ಹೋದ ಮೇಲೆ ನಿಮಗೆ ಅಲ್ಲಿನ ಸಂಸ್ಕೃತಿ ಬಂದು ಬಿಟ್ಟಿದೆ’ ಎಂದು ಕಾರಜೋಳ ಕಾಲೆಳೆದರು.

ADVERTISEMENT

‘ನಮ್ಮ ಜತೆ (ಜನತಾ ಪರಿವಾರ) ಇದ್ದಾಗ ಚೆನ್ನಾಗಿದ್ದೀರಿ. ಕೋಮುವಾದಿ ಪಾರ್ಟಿ ಸೇರಿದ ಮೇಲೆ ನೀವು ಬದಲಾವಣೆ ಆಗಿಬಿಟ್ಟಿರಿ. ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ. ಆದರೆ ನಿಮಗೆ ಸಂಘ ಪರಿವಾರದ ಸಂಸ್ಕೃತಿ ಬಂದಿದೆಯೋ ಇಲ್ಲವೋ’ ಎಂದು ನಗುತ್ತಲೇ ಸಿದ್ದರಾಮಯ್ಯ ಕುಟುಕಿದರು.

‘ಕೋಮುವಾದಿಗಳು ಯಾರೂ ಇಲ್ಲ. ಸಂಘ ಪರಿವಾರದವರು ಎಂದರೆ ಶರಣರು, ಸಂತರ ರೀತಿ ಇರುತ್ತಾರೆ. ಸಾಮಾಜಿಕ ಕಳಕಳಿ, ದೇಶಭಕ್ತಿ ಇರುತ್ತದೆ. ಅವರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಾರೆ. ಮುಖ್ಯಮಂತ್ರಿಗಳು ಸಂಘ ಪರಿವಾರದ ಒಳ ಹೋಗಿ ಬಂದರೆ ಅವರಿಗೂ ಗೊತ್ತಾಗುತ್ತದೆ. ಸುಮ್ಮನೆ ರಾಜಕಾರಣಕ್ಕೆ ಟೀಕಿಸುತ್ತೀರಿ’ ಎಂದು ಕಾರಜೋಳ ಹೇಳಿದರು.

‘ನಿಮಗೆ ಸಂಘ ಪರಿವಾರ ಒಗ್ಗಿ ಬರುವುದಿಲ್ಲ. ವಿಧಿ ಇಲ್ಲದೇ ಇದ್ದೀರಿ. ನಾನೇನು ರಾಜಕಾರಣ ಮಾಡುವುದಿಲ್ಲ. ನಿಮ್ಮ ಪ್ರಧಾನಿ ರಾಜಕಾರಣ ಮಾಡುತ್ತಿದ್ದಾರೆ. ಅದಕ್ಕೆ ನಾನೂ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಪ್ರಧಾನಿ ಇದ್ದಿದ್ದು ಇದ್ದ ಹಾಗೆ ಹೇಳುತ್ತಿದ್ದಾರೆ. ನೀವು ಯಾಕೆ ಮೈಪರಚಿಕೊಳ್ಳುತ್ತೀರಿ’ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಿನಿಂದ ತಿವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.