ADVERTISEMENT

ಕಾಂಗ್ರೆಸ್‌ –ಜೆಡಿಎಸ್‌ ಮಧ್ಯೆ ವಾಗ್ಯುದ್ಧ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ (ಡಿಸಿಸಿ) ನಕಲಿ ಸದಸ್ಯರ ಹೆಸರಿನಲ್ಲಿ ನಕಲಿ ಚಿನ್ನವಿರಿಸಿ ₹ 65 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆಸಿದ ಪ್ರಕರಣ ಬುಧವಾರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಮಧ್ಯೆ  ವಾಕ್ಸಮರಕ್ಕೆ ಕಾರಣವಾಯಿತು.

ನಿಯಮ 69ರ ಅಡಿಯಲ್ಲಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್‌ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ಮಧು ಬಂಗಾರಪ್ಪ ಮತ್ತು ಎಚ್‌.ಎಸ್‌. ಶಿವಶಂಕರ್‌, ‘ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಬಾರದು’ ಎಂದು ಪಟ್ಟು ಹಿಡಿದರು.

ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳದ ಕಿಮ್ಮನೆ, ‘ಈ ಅವ್ಯವಹಾರದಲ್ಲಿ ಬ್ಯಾಂಕಿನ ಅಧ್ಯಕ್ಷ ಆರ್‌. ಮಂಜುನಾಥ್ ಗೌಡ ನೇರವಾಗಿ ಭಾಗಿಯಾಗಿದ್ದಾರೆ. ಅಡವಿಟ್ಟ ಚಿನ್ನವೂ ಇಲ್ಲ. ಸಾಲ ಪಡೆದ ವ್ಯಕ್ತಿಗಳೂ ಇಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು. ಅಲ್ಲದೆ, ‘ಕಳ್ಳರ ರಕ್ಷಣೆ ಏಕೆ ಬರುತ್ತೀರಾ?’ ಎಂದು ಜೆಡಿಎಸ್‌ ಸದಸ್ಯರನ್ನು ಕೆಣಕಿದರು.

ADVERTISEMENT

ಇದರಿಂದ ಕೆರಳಿದ ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರಿಗೆ ಬಂದು ಚರ್ಚೆಗೆ ಅವಕಾಶ ನೀಡಲೇಬಾರದು ಎಂದು ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ‘ಪ್ರಕರಣ ನ್ಯಾಯಾಲಯದಲ್ಲಿರುವುದು ಹೌದೇ’ ಎಂದು ಪ್ರಶ್ನಿಸಿದರು. ‘ಡಿಸಿಸಿ ಬ್ಯಾಂಕ್‌ನ್ನು ಸೂಪರ್‌ಸೀಡ್‌ ಮಾಡಿದ ಸರ್ಕಾರದ ಆದೇಶಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದೆ ಅಷ್ಟೆ’ ಎಂದು ಕಿಮ್ಮನೆ ಸ್ಪಷ್ಟನೆ ನೀಡಿದರು.

ಜೆಡಿಎಸ್‌ ಸದಸ್ಯರು ಸುಮ್ಮನಾಗದೇ ಇದ್ದಾಗ, ‘ಯಾರ್ರೀ ನೀವು. ಬನ್ರಿ... ನಿಮ್ಮ ಸೀಟಲ್ಲಿ ಕುಳಿತು ಕೊಳ್ರಿ. ನಿಮ್ಮಿಂದ ನಾವು ಕಲಿಯಬೇಕಿಲ್ಲರ್ರೀ’ ಎಂದು ಕಾಂಗ್ರೆಸ್‌ ಅಭಯಚಂದ್ರ ಜೈನ್‌ ರೇಗಾಡಿದರು. ಆಗ ರೇವಣ್ಣ ಮತ್ತು ಜೈನ್‌ ಏಕವಚನದಲ್ಲಿ ಕಿತ್ತಾಡಿದರು.

ಮಾತು ಮುಂದುವರಿಸಿದ ಕಿಮ್ಮನೆ, ‘ತಾಕತ್ತಿದ್ದರೆ ನಿಮ್ಮ ಸೀಟ್‌ಗೆ ಬಂದು ಮಾತನಾಡ್ರಿ. ಆರೋಪಿ ಚುನಾವಣೆ ವೆಚ್ಚ ನೋಡಿಕೊಳುತ್ತೇನೆ ಅಂದಿದ್ದಾನಂತೆ. ಅದಕ್ಕೆ ಈ ವಿಷಯದ ಚರ್ಚೆ ಬೇಡ ಎನ್ನುತ್ತಿದ್ದಾರೆ’ ಎಂದು ಕಿಡಿಕಾರಿದರು.

ಮಧ್ಯಪ್ರವೇಶಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ವಿಷಯ ಪ್ರಸ್ತಾವಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಸಭಾಧ್ಯಕ್ಷ ಪೀಠದ ಎದುರಿನಿಂದ ಜೆಡಿಎಸ್‌ ಸದಸ್ಯರು ಮರಳದಿದ್ದಾಗ ಮತ್ತಷ್ಟು ಆಕ್ರೋಶಗೊಂಡ ಕಿಮ್ಮನೆ, ‘ಏಯ್‌ ಮಿಸ್ಟರ್‌. ಶಟ್‌ ಅಪ್‌ ಯುವರ್‌ ಮೌತ್‌. ಮಧು ಬಂಗಾರಪ್ಪ ಅಲ್ಲಿ ನಿಮಗೇನ್ರಿ ಕೆಲಸ. ಹೋಗ್ರಿ, ನಿಮ್ಮ ಸೀಟ್‌ನಲ್ಲಿ ಕುಳಿತುಕೊಳ್ರಿ’ ಎಂದು ರೇಗಾಡಿದರು.

ಜೆಡಿಎಸ್‌ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳುತ್ತಿದ್ದಂತೆ ಮಾತು ಮುಂದುವರಿಸಿದ ಕಿಮ್ಮನೆ, ‘ಪ್ರಕರಣದಲ್ಲಿ ಮಂಜುನಾಥ ಗೌಡ 15ನೇ ಆರೋಪಿ. ನಕಲಿ ಹೆಸರುಗಳಲ್ಲಿ ಸಾಲ ಕೊಡಲು ಅವರೇ ಕಾರಣ. ಕಾಳ ಸನ್‌ ಆಫ್‌ ಬೋಳ ಹೆಸರಿನಲ್ಲಿ ಬೋಗಸ್‌ ಸಾಲ ವಿತರಣೆ ಮಾಡಿದ್ದಾರೆ. ಈಗಲೂ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಕಳ್ಳರ ಕೈಯಲ್ಲಿ ಕೀ ಕೊಟ್ಟರೆ ಏನು ಪ್ರಯೋಜನ. ತಕ್ಷಣ ಅವರನ್ನು ನಿರ್ದೇಶಕ ಮತ್ತು ಸದಸ್ಯತ್ವದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಟಿ.ಬಿ. ಜಯಚಂದ್ರ, ‘ಬ್ಯಾಂಕಿನಲ್ಲಿ ನಕಲಿ ಬಂಗಾರ ಅಡಿವಿಟ್ಟ 486 ಪ್ರಕರಣಗಳಲ್ಲಿ ₹ 40.57 ಕೋಟಿ, ಭಾಗಶಃ ಬಂಗಾರ ಅಡವಿಟ್ಟ 114 ಪ್ರಕರಣಗಳಲ್ಲಿ ₹ 5.05 ಕೋಟಿ, ಆಭರಣ ಅಡವು ಇಡದೇ ಸಾಲ ನೀಡಿದ 185 ಪ್ರಕರಣಗಳಲ್ಲಿ ₹ 17.13 ಕೋಟಿ ದುರುಪಯೋಗವಾಗಿದೆ. 18  ಆರೋಪಿಗಳ ಕುರಿತು ತನಿಖೆ ನಡೆಸಿದ್ದ ಸಿಐಡಿ ಏಳು ಮಂದಿಯ ಮೇಲಿನ ಆರೋಪ ಸಾಬೀತಾಗದ ಕಾರಣ ಪಟ್ಟಿಯಿಂದ ಕೈಬಿಟ್ಟಿದೆ’ ಎಂದರು.

‘ಅಧ್ಯಕ್ಷ ಮಂಜುನಾಥ ಗೌಡ ಆದಾಯಕ್ಕಿಂತ ಶೇ 155.83ರಷ್ಟು ಹೆಚ್ಚು ಆಸ್ತಿ ಅಕ್ರಮವಾಗಿ ಗಳಿಸಿರುವುದು ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರಿಗೆ ಈಗಾಗಲೇ ಅನುಮತಿ ನೀಡಲಾಗಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.