ADVERTISEMENT

ಪರಿಶಿಷ್ಟರ ಹಣ ದುರ್ಬಳಕೆ ವಿರುದ್ಧ ಪ್ರತಿಭಟನೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:41 IST
Last Updated 22 ಫೆಬ್ರುವರಿ 2018, 19:41 IST
ಹಾವೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಿತ್ತೂರ ಕರ್ನಾಟಕ ಪರಿಶಿಷ್ಟ ಸಮುದಾಯಗಳ ಸಮಾವೇಶದಲ್ಲಿ ‘ಪ್ರಜಾವಾಣಿ’ ವರದಿ ಓದಿದ ಯಡಿಯೂರಪ್ಪ
ಹಾವೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಿತ್ತೂರ ಕರ್ನಾಟಕ ಪರಿಶಿಷ್ಟ ಸಮುದಾಯಗಳ ಸಮಾವೇಶದಲ್ಲಿ ‘ಪ್ರಜಾವಾಣಿ’ ವರದಿ ಓದಿದ ಯಡಿಯೂರಪ್ಪ   

ಹಾವೇರಿ: ‘ಪರಿಶಿಷ್ಟರಿಗಾಗಿ ಮೀಸಲಿಟ್ಟಿದ್ದ ₹ 929 ಕೋಟಿಯನ್ನು ರಾಜ್ಯ ಸರ್ಕಾರ ರೈತರ ಸಾಲ ಮನ್ನಾಕ್ಕೆ ಬಳಸಿಕೊಂಡಿದ್ದು, ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುರುವಾರ ಇಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ಆಯೋಜಿಸಿದ್ದ ಕಿತ್ತೂರ ಕರ್ನಾಟಕ ಪರಿಶಿಷ್ಟ ಸಮುದಾಯಗಳ ಸಮಾವೇಶದಲ್ಲಿ ಮಾತನಾಡಿದ ಅವರು ಈ ಕುರಿತು ‘ಪ್ರಜಾವಾಣಿ’ಯಲ್ಲಿ ಬಂದಿರುವ ವರದಿಯನ್ನು ಪ್ರದರ್ಶಿಸಿ, ಪ್ರತಿಭಟನೆಗೆ ಮುಂದಾಗಬೇಕು ಎಂದು ಹೇಳಿದರು.

‘ನಿನಗೆ ಮಾನ ಮರ್ಯಾದೆ ಇಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕ ವಚನದಲ್ಲಿ ಪ್ರಶ್ನಿಸಿದರು. ‘ಸಾಲ ಮನ್ನಾಕ್ಕೆ ಬೇರೆ ಯಾವುದೇ ಹಣ ಇರಲಿಲ್ಲವೇ? ದಲಿತರ ಅಭಿವೃದ್ಧಿಗೆ ಸೇರಿದ ಹಣವನ್ನು ವಾಪಾಸ್ ನೀಡದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಹೀಗೇ ಬಿಟ್ಟರೆ ಲಜ್ಜೆಗೆಟ್ಟ ಮನುಷ್ಯ ಏನು ಮಾಡಲೂ ಸಿದ್ಧನಿದ್ದಾನೆ. ಸಿದ್ದರಾಮಯ್ಯ ಜನರ ಜೊತೆ ಚಲ್ಲಾಟ ಆಡುವ ಬದಲು, ಶ್ವೇತ ಪತ್ರ ಹೊರಡಿಸಲಿ’ ಎಂದು ಆಗ್ರಹಿಸಿದರು.

‘ಈ ಬಗ್ಗೆ ಪ್ರಶ್ನಿಸಬೇಕಿದ್ದ ಸಚಿವರೆಲ್ಲ ಮೌನಕ್ಕೆ ಶರಣಾಗಿದ್ದಾರೆ. ಇದನ್ನು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಗೆ ಒಪ್ಪಿಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.

‘ರಾಹುಲ್‌ ಗಾಂಧಿ ಎಂಬ ಬಚ್ಚಾನಾ ಕರೆದುಕೊಂಡು ಬಜ್ಜಿ–ಪಕೋಡ ತಿಂದುಕೊಂಡು ನಾಟಕ ಮಾಡುತ್ತಿದ್ದಾರೆ. ಜನ ಇದಕ್ಕೆ ಮರಳಾಗುವುದಿಲ್ಲ’ ಎಂದರು.

ಎಲ್ಲಿದೆ ಬ್ರಿಗೇಡ್‌?

‘ಈಗ ಎಲ್ಲಿದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌? ಇದೆಲ್ಲ ಟಿ.ವಿ.ಗಳ ಸೃಷ್ಟಿ...’ ಹೀಗೆ ಕಿಡಿಕಾರಿದ್ದು ಯಡಿಯೂರಪ್ಪ.

ಕೆ.ಎಸ್. ಈಶ್ವರಪ್ಪ ನೇತೃತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಕರ್ತರು ಕಾಂಗ್ರೆಸ್ ಸೇರು
ತ್ತಾರೆ ಎನ್ನುವ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಸಿಟ್ಟಾದರು. ‘ಇದೆಲ್ಲ ಯಾರು ಹೇಳಿದ್ದಾರೆ? ಸೇರುವವರ ಹೆಸರುಗಳಿದ್ದರೆ ಕೊಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.