ADVERTISEMENT

ಮಸ್ಕಿ: ಸರ್ಕಾರಿ ಉಗ್ರಾಣದಲ್ಲಿ ಭತ್ತ ತುಂಬಿದ್ದ 6 ಸಾವಿರ ಚೀಲ ನಾಪತ್ತೆ

ಭತ್ತದ ಮೇಲೆ ಸಾಲ ನೀಡಿದ್ದ ಸುಕೋ, ಮುದಗಲ್ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 12:45 IST
Last Updated 17 ಅಕ್ಟೋಬರ್ 2019, 12:45 IST
ಮಸ್ಕಿ ಉಗ್ರಾಣ ನಿಗಮದಲ್ಲಿನ ಭತ್ತದ ಚೀಲಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುಕೋ ಬ್ಯಾಂಕ್ ಅಧಿಕಾರಿಗಳು ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಮಸ್ಕಿ ಉಗ್ರಾಣ ನಿಗಮದಲ್ಲಿನ ಭತ್ತದ ಚೀಲಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುಕೋ ಬ್ಯಾಂಕ್ ಅಧಿಕಾರಿಗಳು ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು   

ಮಸ್ಕಿ: ಇಲ್ಲಿನ ಸರ್ಕಾರಿ ಉಗ್ರಾಣದಲ್ಲಿ ಸಂಗ್ರಹಿಸಲಾಗಿದ್ದು 80 ಲಕ್ಷ ಮೌಲ್ಯದಭತ್ತ ತುಂಬಿದ್ದ6 ಸಾವಿರ ಚೀಲಗಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಉಗ್ರಾಣದಲ್ಲಿ ಸುಕೋ ಬ್ಯಾಂಕ್‌ಗೆ ಸೇರಿದ 7,886 ಚೀಲಗಳನ್ನು ಸಂಗ್ರಹ ಮಾಡಲಾಗಿತ್ತು. ಅದರಲ್ಲಿ 4,578 ಚೀಲಗಳು ನಾಪತ್ತೆಯಾಗಿವೆ. ಅದೇ ರೀತಿ ಮುದಗಲ್ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್‌ನಿಂದ ಸಂಗ್ರಹಿಸಿದ್ದ 1,500 ಚೀಲಗಳು ನಾಪತ್ತೆಯಾಗಿವೆ.

ಸ್ಥಳೀಯ ವರ್ತಕರೊಬ್ಬರು ಸುರಪುರ ಸೇರಿದಂತೆ ವಿವಿಧ ಭಾಗಗಳ ರೈತರಿಂದ ಭತ್ತ ಖರೀದಿಸಿ ಪಟ್ಟಣದ ಉಗ್ರಾಣದಲ್ಲಿ ಸಂಗ್ರಹಿಸಿದ್ದರು. ಅದರ ಮೇಲೆ ಸುಕೋ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಮುದಗಲ್ ಅರ್ಬನ್ ಕೋ–ಆಪರೇಟಿವ್‌ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ.

ADVERTISEMENT

ಬುಧವಾರ ರಾತ್ರಿ ಉಗ್ರಾಣ ಕೋಣೆಯಿಂದ ಭತ್ತದ ಚೀಲಗಳನ್ನು ಸಾಗಿಸಲಾಗುತ್ತಿದೆ ಎಂಬ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸುಕೋ ಬ್ಯಾಂಕ್ ಅಧಿಕಾರಿಗಳು, ಭತ್ತದ ಚೀಲಗಳ ಮೇಲೆ ಸಾಲ ಇದ್ದು ಅವುಗಳನ್ನು ಸಾಗಣೆ ಮಾಡದಂತೆ ನಿಗಮದ ಮಸ್ಕಿಯ ಶಾಖೆಯ ವ್ಯವಸ್ಥಾಪಕರಿಗೆ ಸೂಚಿಸಿದರು. ಅಲ್ಲದೇ, ವ್ಯವಸ್ಥಾಪಕನ ವಿರುದ್ಧ ಸುಕೋ ಬ್ಯಾಂಕ್‌ನ ಪ್ರಾಂತೀಯ ವ್ಯವಸ್ಥಾಪಕ ಈಶ್ವರನ್ ಪಿ.ಎನ್. ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ಸ್ಥಳೀಯ ಪೊಲೀಸರ ಸಮಕ್ಷಮದಲ್ಲಿ ಉಗ್ರಾಣ ನಿಗಮದ ಕೊಣೆಗಳನ್ನು ಪರಿಶೀಲನೆ ನಡೆಸಿದಾಗ ಭತ್ತದ ಚೀಲಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ.

ಸುದ್ದಿ ತಿಳಿಯುತ್ತಲೇ ಪಟ್ಟಣಕ್ಕೆ ದೌಡಾಯಿಸಿದ ಉಗ್ರಾಣ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಾಂಡುರಂಗ ಸೇರಿ ಮತ್ತು ಇತರ ಹಿರಿಯ ಅಧಿಕಾರಿಗಳು ತಪಾಸಣೆ ನಡಿಸಿದರು. ಈ ಬಗ್ಗೆ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಮಾಹಿತಿ ಮಾಡಲಾಗಿದೆ ಎಂದು ಪಾಂಡುರಂಗ ತಿಳಿಸಿದ್ದಾರೆ.

ಉಗ್ರಾಣ ನಿಗಮದಲ್ಲಿದ್ದ ಭತ್ತದ ಮೇಲೆ ಸಾಲ ನೀಡಿದ್ದ ಸುಕೋ ಬ್ಯಾಂಕ್ ಹಾಗೂ ಮುದಗಲ್ ಅರ್ಬನ್ ಕೋ ಆಪರೇಟಿವ್‌ ಬ್ಯಾಂಕ್ ಇದೀಗ ಮಸ್ಕಿ ಠಾಣೆಗೆ ನಿಗಮದ ವ್ಯವಸ್ಥಾಪಕನ ವಿರುದ್ಧ ದೂರು ನೀಡಿವೆ.

ನಷ್ಟದಲ್ಲಿ ವರ್ತಕ: ರೈತರಿಂದ ಉದ್ರಿಯಾಗಿ ಭತ್ತ ಖರೀದಿಸಿದ ಸ್ಥಳೀಯ ವರ್ತಕ ನಷ್ಟಕ್ಕೆ ಅನುಭವಿಸಿದ್ದ. ಭತ್ತ ಕೊಟ್ಟ ರೈತರು ಹಣ ಕೊಡುವಂತೆ ಒತ್ತಾಯಿಸುತ್ತಿದ್ದರು.

ಹೀಗಾಗಿ ಬುಧವಾರ ರಾತ್ರಿ ಭತ್ತ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ರೈತರು ಹಾಗೂ ಉಗ್ರಾಣ ನಿಗಮದ ವ್ಯವಸ್ಥಾಪಕ ಉಮೇಶ ನಡುವೆ ವಾಗ್ವಾದ ನಡೆದಿದೆ.

ಕೆಲ ರೈತರು ವ್ಯವಸ್ಥಾಪಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಬ್‌ಇನ್‌ಸ್ಪೆಕ್ಟರ್ ಸಣ್ಣ ವೀರೇಶ ಉಗ್ರಾಣ ನಿಗಮದ ವ್ಯವಸ್ಥಾಪಕರನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.