ADVERTISEMENT

ಕೆಪಿಟಿಸಿಎಲ್‌: 60 ನಿವೃತ್ತ ಎಂಜಿನಿಯರ್‌ಗಳಿಗೆ ‘ಅಧಿಕಾರ’

ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಆದೇಶ ಮೀರಿ ಆದೇಶ; ಮಂಜೂರು ಹುದ್ದೆಗಳಿಗೆ ನಿಯೋಜನೆ

ಆರ್. ಮಂಜುನಾಥ್
Published 23 ಜನವರಿ 2025, 20:24 IST
Last Updated 23 ಜನವರಿ 2025, 20:24 IST
ಕೆಪಿಟಿಸಿಎಲ್‌
ಕೆಪಿಟಿಸಿಎಲ್‌   

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) 60 ನಿವೃತ್ತ ಎಂಜಿನಿಯರ್‌ಗಳನ್ನು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯವರ ಆದೇಶ ಮೀರಿ ನೇಮಿಸಿಕೊಂಡಿದೆ.

ಸರ್ಕಾರಿ ಕೆಲಸದಿಂದ ನಿವೃತ್ತರಾಗಿರುವ ಸಿವಿಎಲ್‌ ಎಂಜಿನಿಯರ್‌ಗಳನ್ನು ‘ಎಂಜಿನಿಯರ್‌ ಆನ್‌ ಡ್ಯುಟಿ (ಇಒಡಿ) ಎಂದು ‍ತಾತ್ಕಾಲಿಕ ಆಧಾರ’ದಲ್ಲಿ ಕೆಪಿಟಿಸಿಎಲ್‌ ಕಾರ್ಪೊರೇಟ್‌ ಕಚೇರಿ ಹಾಗೂ  ಪ್ರಸರಣ ವಲಯಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಕೆಪಿಟಿಸಿಎಲ್‌ನ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರು ಜನವರಿ 9ರಂದು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

‘ಇಒಡಿ’ ಹುದ್ದೆಗಳನ್ನು ಮೂರು ವರ್ಗಗಳಲ್ಲಿ ಸೃಜಿಸಲಾಗಿದೆ. 1957ರಿಂದ 1964ರವರೆಗೆ ಜನಿಸಿದವರನ್ನು ನೇಮಕ ಮಾಡಿಕೊಂಡು, ಅವರಿಗೆ ಕಿರಿಯ ಎಂಜಿನಿಯರ್‌ ಅಥವಾ ಸಹಾಯಕ ಎಂಜಿನಿಯರ್‌ ಅವರ ಕಾರ್ಯಗಳನ್ನು ನೀಡಲಾಗಿದೆ. ಜೊತೆಗೆ, ಸಬ್‌–ಸ್ಟೇಷನ್‌ಗಳ ಸಿವಿಲ್‌ ಎಂಜಿನಿಯರಿಂಗ್‌ ಕಾಮಗಾರಿಗಳ ಮೇಲ್ವಿಚಾರಣೆ, ಪರಿಶೀಲನೆ ನಡೆಸುವ ಜವಾಬ್ದಾರಿ ವಹಿಸಲಾಗಿದೆ.

ADVERTISEMENT

‘ನಿವೃತ್ತ ನೌಕರರನ್ನು ನೇಮಿಸಿಕೊಳ್ಳುವುದರಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ಹೊರೆಯಾಗುತ್ತಿದೆ. ಅಲ್ಲದೆ,  ನಿವೃತ್ತರಲ್ಲಿ ಕಾರ್ಯಕ್ಷಮತೆಯ ಗುಣಮಟ್ಟ ಮತ್ತು ಉತ್ತರದಾಯಿತ್ವದ ಕೊರತೆಯೂ ಇರುತ್ತದೆ. ಹೀಗಾಗಿ ಇಲಾಖೆಗಳಲ್ಲಿರುವ ನಿವೃತ್ತರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಯವರಿಗೆ 2024ರ ಜನವರಿ 9ರಂದು ಸೂಚಿಸಿದ್ದರು. ಇದರಂತೆ, ಮುಖ್ಯ ಕಾರ್ಯದರ್ಶಿಯವರು ಎಲ್ಲ ಇಲಾಖೆಗಳ ಮುಖ್ಯ, ಪ್ರಧಾನ, ಕಾರ್ಯದರ್ಶಿಗಳಿಗೆ 2024ರ ಜನವರಿ 23ರಂದು ಸೂಚನೆ ನೀಡಿ, ‘ನಿವೃತ್ತರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು. ಖಾಲಿ ಹುದ್ದೆಗಳಿಗೆ ನಿಯೋಜನೆ ಮಾಡಿಕೊಳ್ಳಬೇಕು’ ಎಂದು ಆದೇಶಿಸಿದ್ದರು.

ಈ ಆದೇಶದ ನಂತರವೂ ಕೆಪಿಟಿಸಿಎಲ್‌, ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಪ್ರಾಮುಖ್ಯ ನೀಡದೆ, ಮಂಜೂರಾದ ಹುದ್ದೆಗಳ ಕೆಲಸವನ್ನು ನಿವೃತ್ತ ಎಂಜಿನಿಯರ್‌ಗಳಿಗೆ ನೀಡಲಾಗಿದೆ.

‘ಕೆಪಿಟಿಸಿಎಲ್‌ನ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ನಿವೃತ್ತರನ್ನು ಯಾವುದೇ ರೀತಿಯಲ್ಲೂ ನೇಮಿಸಿಕೊಳ್ಳುವಂತಿಲ್ಲ. ಅಲ್ಲದೆ, ಮಂಜೂರಾದ ಹುದ್ದೆಗಳಿಗೆ ಗುತ್ತಿಗೆ/ ತಾತ್ಕಾಲಿಕ ಆಧಾರದಲ್ಲೂ ನೇಮಕ ಮಾಡಿಕೊಳ್ಳುವಂತಿಲ್ಲ. 60 ನಿವೃತ್ತ ಎಂಜಿನಿಯರ್‌ಗಳನ್ನು ‘ತಾತ್ಕಾಲಿಕ ಆಧಾರ’ ಎಂದು ಹೆಸರಿಗಷ್ಟೇ ಹೇಳಿಕೊಂಡು, ಮಂಜೂರಾದ ಹುದ್ದೆಗಳ ಎಂಜಿನಿಯರ್‌ಗಳು ನಿರ್ವಹಿಸುವ ಕಾರ್ಯಗಳನ್ನು ನೀಡಲಾಗಿದೆ. ನಿವೃತ್ತರಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಬರುತ್ತಿದ್ದರೂ ಅವರಿಗೇ ಮಣೆ ಹಾಕಲಾಗಿದೆ. ಯುವಕರು ಅರ್ಜಿ ಸಲ್ಲಿಸಿ ನೇಮಕಕ್ಕೆ ಕಾಯುತ್ತಿದ್ದರೂ ಅತ್ತ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಅಲ್ಲದೆ, ನಿವೃತ್ತರಾದ ಮೇಲೆ ಅವರ ಕಾರ್ಯದಕ್ಷತೆಯೂ ಹೆಚ್ಚಿರುವುದಿಲ್ಲ’ ಎಂದು ಕೆಪಿಟಿಸಿಎಲ್‌ನ ನಿವೃತ್ತ ಅಧಿಕಾರಿ ಮನಮೋಹನ್‌ ದೂರಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

ನಿವೃತ್ತ ಎಂಜಿನಿಯರ್‌ ನೇಮಕಕ್ಕೆ ಅನುಮೋದನೆ ನೀಡಿರುವ ಹಾಗೂ ವೇತನವನ್ನೂ ನೀಡುವ ಕೆಪಿಟಿಸಿಎಲ್‌ನ ಆಡಳಿತ ಮತ್ತು  ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಬಿ.ಪಿ. ವಿಜಯ್‌ ಅವರು ‘ತಾಂತ್ರಿಕ ನಿರ್ದೇಶಕರನ್ನು ಕೇಳಿ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.