ADVERTISEMENT

‘ರಾಜ್ಯದ ಜೈಲುಗಳಲ್ಲಿ 641 ಮಹಿಳಾ ಕೈದಿಗಳು’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:59 IST
Last Updated 2 ಆಗಸ್ಟ್ 2019, 18:59 IST

ಬೆಂಗಳೂರು: ‘ರಾಜ್ಯದ ವಿವಿಧ ಜೈಲುಗಳಲ್ಲಿ 641 ಮಹಿಳಾ ಕೈದಿಗಳಿದ್ದಾರೆ ಮತ್ತು ಈ ಕೈದಿಗಳ 6 ವರ್ಷದೊಳಗಿನ 41 ಮಕ್ಕಳು ಜೈಲುಗಳಲ್ಲಿ ವಾಸ ಮಾಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಕಾರಾಗೃಹಗಳ ಅಧೀಕ್ಷಕ ಕೆ.ಸುರೇಶ್‌ ಅವರ ಪ್ರಮಾಣ ಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

‘ರಾಜ್ಯದಲ್ಲಿ ಕೇಂದ್ರ, ಜಿಲ್ಲಾ, ತಾಲ್ಲೂಕು ಹಾಗೂ ಬಯಲು ಬಂದಿಖಾನೆ ಸೇರಿ ಒಟ್ಟು 60 ಕಾರಾಗಾಹೃಗಳು 13,622 ಕೈದಿಗಳ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿ ಸದ್ಯ 15,257 ಕೈದಿಗಳು ಇದ್ದಾರೆ. ಒಟ್ಟು ಸಾಮರ್ಥ್ಯಕ್ಕಿಂತ 1,635 ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿಗದಿತ ಸಾಮರ್ಥ್ಯಕ್ಕಿಂತ ಶೇ 11ರಷ್ಟು ಹೆಚ್ಚಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ಜೈಲುಗಳಲ್ಲಿ ಕೈದಿಗಳ ಅಸಹಜ ಸಾವುಗಳು ಸಂಭವಿಸಿದಾಗ ಅವರ ಕುಟುಂಬಸ್ಥರಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರ ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್‌ ದಾಖಲಿಸಿರುವ ಸ್ವಯಂಪ್ರೇರಿತ ಪಿಐಎಲ್‌ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.