ADVERTISEMENT

65ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಭಾಷೆ, ನೆಲ ತಾಯಿಗೆ ಸಮಾನ –ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 9:52 IST
Last Updated 7 ನವೆಂಬರ್ 2020, 9:52 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು   

ಬೆಂಗಳೂರು: ‘ನಮ್ಮ ಭಾಷೆ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಎನ್ನುವುದು ಆಸ್ಮಿತೆಯ ಭಾಗ. ಭಾಷೆ ಮತ್ತು ಜನ್ಮಭೂಮಿ ನಮಗೆ ಹೆತ್ತ ತಾಯಿಗೆ ಸಮಾನ. ಹೆತ್ತ ತಾಯಿಗೆ ಸಲ್ಲುವಂಥ ಎಲ್ಲ ಗೌರವ, ಆದರಗಳು ನಮ್ಮ ಭಾಷೆ ಮತ್ತು ಹುಟ್ಟಿದ ನಾಡಿಗೆ ಸಲ್ಲಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ 65 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಕನ್ನಡವನ್ನು ನಾವು ಬೆಳೆಸಬೇಕು. ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ’ ಎಂದರು.

‘ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷ ಎಂದು ಆಚರಿಸಲಾಗುತ್ತದೆ’ ಎಂದೂ ಅವರು ಹೇಳಿದರು.

ADVERTISEMENT

‘ಆಧುನಿಕ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನು ಶರವೇಗದಲ್ಲಿ ಆವರಿಸಿಕೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ನಾವು ನಮ್ಮ ಭಾಷೆಯನ್ನು ಸಜ್ಜುಗೊಳಿಸುವ ಅನಿವಾರ್ಯತೆ ಇದೆ’ ಎಂದರು.

‘ಕನ್ನಡದ ಸಾಮರ್ಥ್ಯ, ತೀಕ್ಷ್ಣತೆ, ಶಕ್ತಿ, ಅದರ ಓಜಸ್ಸು ಬೇರೆ ಯಾವುದೇ ಭಾಷೆಗೆ ಇಲ್ಲ ಎಂದು ಕುವೆಂಪು ಹೇಳಿದ್ದಾರೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಅನೇಕರು ಶ್ರಮಿಸಿದ್ದಾರೆ. ಕನ್ನಡ ನಮ್ಮ ಹೃದಯದ ಭಾಷೆ. ಜೊತೆಗೆ ಅದನ್ನು ದೈನಂದಿನ ಚಟುವಟಿಕೆಯಲ್ಲಿ ಹೆಚ್ಚು ಬಳಸುವ ಮೂಲಕ ಬೆಳೆಸಬೇಕು’ ಎಂದರು.

‘ಕನ್ನಡದ ಸೌಂದರ್ಯ, ಸತ್ವವನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದ ಯಡಿಯೂರಪ್ಪ, ‘ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಎಲ್ಲರೂ ನಾಡು, ನುಡಿಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಬಾರಿ ಅತ್ಯಂತ ಪಾರದರ್ಶಕವಾಗಿ, ಎಲೆಮರೆ ಕಾಯಿಯಂತಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದರು.

65 ಮುತ್ತುಗಳು: ‘ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಯಾವುದೇ ವಿವಾದ ಆಯ್ಕೆ ಮಾಡಿದ್ದೇವೆ. ಅಸಂಖ್ಯಾ ಸಾಧಕ ಮುತ್ತುಗಳನ್ನು ಹೆಕ್ಕಿ ತೆಗೆದಂತೆ 65 ಮುತ್ತುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ಇನ್ನು ಹಲವು ಮುತ್ತುಗಳು ಪ್ರಶಸ್ತಿಯಿಂದ ಹೊರಗೆ ಉಳಿದಿವೆ. ಆದರೆ, ಸೀಮಿತ ಸಂಖ್ಯೆಯಲ್ಲಿ ಪ್ರಶಸ್ತಿ ನೀಡಬೇಕಾಗಿರುವುದರಿಂದ ಕೆಲವೇ ಸಾಧಕರಿಗೆ ಪ್ರಶಸ್ತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಾಡು-ನುಡಿಯ ಸೇವೆ ಮಾಡಿರುವ ಎಲ್ಲ ಮುತ್ತುಗಳಿಗೂ ಪ್ರಶಸ್ತಿ ಸಿಗಲಿದೆ’ ಎಂದರು.

ಅನ್ನದಾತನಿಗೆ ನೆರವು ನೀಡಿ: ‘ವ್ಯವಸಾಯ ಎಂದರೆ ನೀ ಸಾಯಾ, ನಿಮ್ಮಪ್ಪ ಸಾಯಾ ಮನೆ ಮಂದಿಯೆಲ್ಲಾ ಸಾಯಾ ಎಂಬುದು ಸರಿಯಲ್ಲ. ಸಾಯಾವನ್ನು ಸಹಾಯ ಮಾಡಬೇಕು’ ಎಂದು ಕೃಷಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪ್ರಗತಿಪರ ರೈತ ಮಹಿಳೆ ಸುಮಂಗಲಮ್ಮ ಹೇಳಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಅವರು, ‘ಎಲ್ಲರಿಗೂ ಅನ್ನ ನೀಡುವುದು ರೈತ. ಅನ್ನದಾತನ ನೆರವಿಗೆ ಎಲ್ಲರೂ ಧಾವಿಸಬೇಕು. ಅನ್ನದಾತ ಬೆನ್ನೆಲುಬು ಎಂದು ಹೇಳುತ್ತಾರೆ. ಈ ಬೆನ್ನೆಲುಬನ್ನು ಯಾರೂ ಮುರಿಯುವ ಕೆಲಸ ಮಾಡಬಾರದು’ ಎಂದರು.

‘ರಾಜ್ಯ ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ರೈತರು ಎಂದೂ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಎಷ್ಟೇ ಕಷ್ಟ ಬಂದರೂ ಅದನ್ನು ಸಹಿಸಿಕೊಂಡು ಗಂಜಿಯನ್ನೋ, ನೀರನ್ನೋ ಕುಡಿದು ಬದುಕುತ್ತಾರೆ. ಬರಪೀಡಿತ ಪ್ರದೇಶದ ಜನ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನೀರಾವರಿ ಜಮೀನು ಹೊಂದಿರುವ, ಸಮೃದ್ಧಿ ಹೊಂದಿರುವವರು ಆತ್ಮಹತ್ಯೆ ಮಾಡಿಕೊಳ್ಳುವರು’ ಎಂದರು.

‘ರೈತ ಮಹಿಳೆಯಾಗಿ ಹಲವು ಕಷ್ಟದ ನಡುವೆಯೂ ಸಮಗ್ರ ಕೃಷಿ ಮಾಡಿ ಕೃಷಿಯಲ್ಲೇ ಬದುಕು ಕಂಡುಕೊಂಡು ಮುಂದೆ ಬಂದಿದ್ದೇನೆ. ಈ ಪ್ರಶಸ್ತಿಗೆ ನಾನು ಅರ್ಹಳೊ, ಇಲ್ಲವೊ ಗೊತ್ತಿಲ್ಲ. ಅತ್ಯಂತ ಬರಪೀಡಿತ ಪ್ರದೇಶದ ಚಿತ್ರದುರ್ಗ ಜಿಲ್ಲೆಯ ಬೀದಿಗೆರೆ ಹಳ್ಳಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಪ್ರಗತಿ ಸಾಧಿಸಿದ್ದೇನೆ. ಬೇರೆಡೆ ಮಳೆ ಬರದಿದ್ದರೂ ನಮ್ಮ ಊರಿನ ಐದು ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಬರುವಂತೆ ಮಾಡಿಕೊಂಡಿದ್ದೇವೆ. ಇದಕ್ಕೆ ಕಾರಣ ಕಾಡು ಕಟ್ಟುತ್ತಿರುವುದು’ ಎಂದರು.

‘ಕಾಡು ಬೆಳೆಸಿದರೆ ಮಳೆ ಬರುತ್ತದೆ. ನಮ್ಮ ಕಡೆ ಮೊಹರಂ ಹಬ್ಬದಲ್ಲಿ ಮರಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಇದನ್ನು ತಡೆಯಬೇಕು. ಮರಗಳ ಮಾರಣಹೋಮ ನಿಲ್ಲಬೇಕು. ಸರ್ಕಾರ ಕೃಷಿಕರ ನೆರವಿಗೆ ಬರಬೇಕು. ಅನ್ನದಾತ ಇಲ್ಲದಿದ್ದರೆ ಯಾರೂ ಇರುವುದಿಲ್ಲ. ಹೀಗಾಗಿ ರೈತರನ್ನು ಉಳಿಸಿ, ಬೆಳೆಸಿ. ರೈತರಿಗೆ ನೆರವಾಗಿ’ ಎಂದು ಮನವಿ ಮಾಡಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ತೇಜಸ್ವಿಸೂರ್ಯ ಇದ್ದರು.

ಸಚಿವ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಸಿ.ಟಿ ರವಿ ಮನವಿ: ‘ಸಂಪುಟ ರಚನೆ ಬಳಿಕ‌ ಮುಖ್ಯಮಂತ್ರಿಯವರು ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದರು. ಆದರೆ, ಕೆಲವರು‌ ಇನ್ನೂ ಬೇರೆಯ ಇಲಾಖೆ ಕೊಡಬೇಕಿತ್ತು ಎಂದರು. ಆರಂಭದಲ್ಲಿ ನನಗೂ ಹಾಗೇ ಅನ್ನಿಸಿತ್ತು. ಆದರೆ ಹೋಗ್ತಾ ಹೋಗ್ತಾ ಈ ಇಲಾಖೆಯೇ ಶ್ರೇಷ್ಠ ಎಂಬ ಭಾವನೆ‌ ಮೂಡಿತು. ಇದು ನಿಜಕ್ಕೂ ಕನಸು ಕಾಣುವ ಖಾತೆ. ಸ್ವರ್ಗವನ್ನು ಕಾಣುವ ಮತ್ತೇರಿಸುವ ಖಾತೆ’ ಎಂದು ಸಿ.ಟಿ. ರವಿ ಬಣ್ಣಿಸಿದರು.

‘ಪಕ್ಷದ‌ ಜವಾಬ್ದಾರಿ ಕಾರಣಕ್ಕೆ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ‌ ನೀಡಿದ್ದೇನೆ. ನ. 2ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಚಿವ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೆ. ಆದರೆ,‌ ಇನ್ನೂ ಅಂಗೀಕರಿಸಿಲ್ಲ. ಇಂದು (ಶನಿವಾರ) ರಾಜೀನಾಮೆ ಅಂಗೀಕರಿಸುತ್ತಾರೆಂಬ ವಿಶ್ವಾಸವಿದೆ. ಮುಂದೆ ಬರುವ ಸಚಿವರು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆಂಬ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.