ಹಾವೇರಿ: ರಾಜ್ಯದ ನಾಲ್ಕು ವಿದ್ಯುತ್ ನಿಗಮಗಳ ವ್ಯಾಪ್ತಿಯಲ್ಲಿನ 24 ಜಿಲ್ಲೆಗಳ 55.51 ಲಕ್ಷ ಗೃಹ ಬಳಕೆ ಗ್ರಾಹಕರು ಒಟ್ಟು ₹734.35 ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ.
‘ಗೃಹಜ್ಯೋತಿ’ ಜಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರೊಳಗೆ ಗೃಹ ಬಳಕೆ ಗ್ರಾಹಕರು ವಿದ್ಯುತ್ ಶುಲ್ಕದ ಹಳೆಯ ಬಾಕಿ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ, ವಿದ್ಯುತ್ ಸಂಪರ್ಕ ಕಡಿತ
ಗೊಳ್ಳಲಿದೆ ಎಂದು ಸರ್ಕಾರ ಜೂನ್ 5ರಂದು ತಿಳಿಸಿತ್ತು. ಬಾಕಿ ಪಾವತಿಸದಿ
ದ್ದರೆ, ‘ಗೃಹಜ್ಯೋತಿ’ಯ ಉಚಿತ ವಿದ್ಯುತ್ ಯೋಜನೆ ಸೌಲಭ್ಯ ಸಿಗುವುದಿಲ್ಲ’ ಎಂದು ವಿದ್ಯುತ್ ನಿಗಮಗಳು ಪ್ರಕಟಣೆ ನೀಡಿದ್ದವು.
‘ಸೆಪ್ಟೆಂಬರ್ 30ರ ಗಡುವು ಮುಗಿದರೂ ನಿರೀಕ್ಷಿತ ಮಟ್ಟದಲ್ಲಿ ಹಳೆಯ ಬಾಕಿ ಶುಲ್ಕದ ವಸೂಲಿ ಆಗುತ್ತಿಲ್ಲ. ಶುಲ್ಕ ಬಾಕಿ ಕಟ್ಟಲು ಮನೆ, ಮನೆಗೆ ತೆರಳಿ ನಮ್ಮ ಸಿಬ್ಬಂದಿ ಕೋರುವಂತಾಗಿದೆ. ಬಾಕಿ ಶುಲ್ಕ ಕಟ್ಟದ ಮನೆಗಳ ವಿದ್ಯುತ್ ಸಂಪರ್ಕವನ್ನು ಹಂತಹಂತವಾಗಿ ಕಡಿತಗೊಳಿಸುತ್ತೇವೆ’ ಎಂದು ಹೆಸ್ಕಾಂ ಸಿಬ್ಬಂದಿ ತಿಳಿಸಿದರು.
‘ಸೆಸ್ಕ್’ನಲ್ಲೇ ವಿದ್ಯುತ್ ಬಾಕಿ ಹೆಚ್ಚು: ನಾಲ್ಕು ವಿದ್ಯುತ್ ನಿಗಮಗಳ ಪೈಕಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯಾಪ್ತಿಯಲ್ಲೇ ಅತಿ ಹೆಚ್ಚು ವಿದ್ಯುತ್ ಬಾಕಿ ಉಳಿದಿದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಹಾಸನ ಜಿಲ್ಲೆಯ 6.43 ಲಕ್ಷ ಗೃಹ ಬಳಕೆ ಗ್ರಾಹಕರು ಒಟ್ಟು ₹339.87 ಕೋಟಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಅದರಲ್ಲೂ ಭಾಗ್ಯಜ್ಯೋತಿ ಫಲಾನುಭವಿಗಳದ್ದೇ ₹140 ಕೋಟಿ ಶುಲ್ಕ ಬಾಕಿ ಉಳಿದಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ (ಹೆಸ್ಕಾಂ) ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬಾಕಿ ಉಳಿಸಿಕೊಂಡ ಜಿಲ್ಲೆಗಳಲ್ಲಿ ಬೆಳಗಾವಿ (₹36.42 ಕೋಟಿ) ಮತ್ತು ಧಾರವಾಡ (₹28.24 ಕೋಟಿ) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿವೆ. ಉತ್ತರ ಕನ್ನಡ ಜಿಲ್ಲೆ (₹7.95 ಕೋಟಿ) ಕೊನೆಯ ಸ್ಥಾನದಲ್ಲಿದೆ.
ಬಾಕಿ ಪಾವತಿಗೆ ಹಿಂದೇಟು: ‘ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡ ಗೃಹ ಬಳಕೆ ಗ್ರಾಹಕರು ನಿಗದಿತ ಯೂನಿಟ್‌ನೊಳಗೆ ಬಳಸಿದರೆ ಮಾತ್ರ ‘ಶೂನ್ಯ ಬಿಲ್’ ಕೊಡುತ್ತೇವೆ. ಹೆಚ್ಚುವರಿ ಯೂನಿಟ್ ಬಳಸಿದರೆ, ನಿಗದಿತ ಯೂನಿಟ್‌ನ ಶುಲ್ಕದ ಮೊತ್ತ ಬಿಲ್‌ನಲ್ಲಿ ಕಡಿತಗೊಳಿಸಿ ಉಳಿದ ಮೊತ್ತದ ಬಿಲ್ ಕೊಡುತ್ತೇವೆ. ಇದನ್ನು ಗ್ರಾಹಕರು ಕಡ್ಡಾಯವಾಗಿ ಪಾವತಿಸಬೇಕು. ಈ ಹೆಚ್ಚುವರಿ ಮೊತ್ತ ಮತ್ತು ಹಳೆಯ ಶುಲ್ಕ ಬಾಕಿ ಪಾವತಿಗೆ ಜನರು ಹಿಂದೇಟು ಹಾಕುತ್ತಾರೆ’ ಎಂದು ಸೆಸ್ಕ್ ಸಿಬ್ಬಂದಿ ತಿಳಿಸಿದರು.
ವಿದ್ಯುತ್ ಖರೀದಿಗೂ ತೊಡಕು: ‘ಏಳು ಜಿಲ್ಲೆಗಳ ಜನರ ಬೇಡಿಕೆ ಅನುಸಾರ ವಿದ್ಯುತ್ ಪೂರೈಕೆ ಹೆಸ್ಕಾಂ ಹೊಣೆ. ಆದರೆ, ಗೃಹ ಬಳಕೆ ಗ್ರಾಹಕರು ₹140 ಕೋಟಿ ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡ ಕಾರಣ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಖರೀದಿ ಹೆಸ್ಕಾಂಗೆ ದೊಡ್ಡ ಸವಾಲಾಗಿದೆ. ವಿದ್ಯುತ್ ಪರಿವರ್ತಕಗಳ (ಟಿಸಿ) ಪೂರೈಕೆ, ಕೊಳವೆಬಾವಿಗಳಿಗೆ ಹೊಸ ವಿದ್ಯುತ್ ಸಂಪರ್ಕ, ವಿದ್ಯುತ್ ತಂತಿ ದುರಸ್ತಿ ಮುಂತಾದ ಕಾರ್ಯಗಳಿಗೆ ಹಣಕಾಸಿನ ಕೊರತೆಯಾಗಿದೆ’ ಎಂದು ಹೆಸ್ಕಾಂ ಎಂಜಿನಿಯರ್‌ಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.