ADVERTISEMENT

8 ಬಾರಿ ಪಕ್ಷೇತರರಿಗೆ ಗೆಲುವು

ಜಿತೇಂದ್ರ ಆರ್
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಹುಬ್ಬಳ್ಳಿ:  ಈಗಿನ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಎಂಟು ಬಾರಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಹುಬ್ಬಳ್ಳಿ ಭಾಗದ ಮೊದಲ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಸಹ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವಿನ ಖಾತೆ ತೆರೆದದ್ದು ವಿಶೇಷ.

ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ 1962ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್.ಆರ್. ಬೊಮ್ಮಾಯಿ ಅವರು ಕಾಂಗ್ರೆಸ್‌ನ ಟಿ.ಕೆ. ಕಾಂಬಳಿ ಎದುರು ಸೋಲು ಕಂಡಿದ್ದರು. 1967ರ ಚುನಾವಣೆಯಲ್ಲೂ ಪಕ್ಷೇತರರಾಗಿ ಕಣಕ್ಕಿಳಿದ ಬೊಮ್ಮಾಯಿ 10,920 ಮತಗಳ ಅಂತರದಿಂದ ಕಾಂಗ್ರೆಸ್‌ನ ಟಿ.ಕೆ. ಕಾಂಬಳಿ ವಿರುದ್ಧ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡರು.

 1972ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಡಿ ಸ್ಪರ್ಧೆಗೆ ಇಳಿದ ಅವರು ಪರಾಭವಗೊಂಡರು. ಈ ಕ್ಷೇತ್ರದಲ್ಲಿ ಬೊಮ್ಮಾಯಿ, ಒಟ್ಟು ಒಂದು ಗೆಲುವು, ಎರಡು ಸೋಲು ಕಂಡರು.  ನಂತರದ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (ಹುಬ್ಬಳ್ಳಿ ಗ್ರಾಮೀಣ) ಕ್ಷೇತ್ರಕ್ಕೆ ತಮ್ಮ  ಸ್ಪರ್ಧೆ ಬದಲಿಸಿಕೊಂಡರು. 1999ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸಿ.ಎಸ್. ಶಿವಳ್ಳಿ ಪಕ್ಷೇತರರಾಗಿ ಗೆಲುವು ಕಂಡರು.

ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರನ್ನು ಆಯ್ಕೆ ಮಾಡಿದ ಕೀರ್ತಿ ಕಲಘಟಗಿ ಕ್ಷೇತ್ರದ ಮತದಾರರಿಗೆ ಸಲ್ಲುತ್ತದೆ. ಮೂರು ಚುನಾವಣೆಗಳಲ್ಲಿ ಇಲ್ಲಿಂದ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 1957ರ ಉಪಚುನಾವಣೆಯಲ್ಲಿ ಬಸವರಾಜ ದೇಸಾಯಿ, 1967ರಲ್ಲಿ ಎಫ್.ಎಸ್. ಪಾಟೀಲ ಹಾಗೂ 1983ರಲ್ಲಿ ಫಾದರ್ ಜೇಕಬ್ ಪಕ್ಷೇತರರಾಗಿ ಆಯ್ಕೆಯಾಗಿದ್ದರು.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಅಂಬಡಗಟ್ಟಿ ಕುಟುಂಬದ ಶಿವಾನಂದ 1999ರಲ್ಲಿ ಪಕ್ಷೇತರರಾಗಿ ಗೆಲುವು ಕಂಡರೆ, 2004ರ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಪಕ್ಷೇತರ ಅಭ್ಯರ್ಥಿಯಾಗಿ ವಿಜಯಿಯಾದರು. ನಂತರದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡರು.


4 ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಈಚೆಗಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದ ಶಾಸಕ ಚಂದ್ರಕಾಂತ ಬೆಲ್ಲದ ಸಹ ಪಕ್ಷೇತರರಾಗಿ ಗೆಲುವು ಕಾಣುವುದರೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದವರು. 1985ರಲ್ಲಿ ಈಗಿನ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ಸಿನ ಲೀಲಾವತಿ ಚರಂತಿಮಠ ವಿರುದ್ಧ ಜಯಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT