ADVERTISEMENT

ಕೆಡಿಸಿಸಿ ಬ್ಯಾಂಕ್‌ನಲ್ಲಿ ಅಂತಿಮ ಹಂತ: ಸಾಲಮನ್ನಾಕ್ಕೆ ಶೇ 81ರಷ್ಟು ರೈತರ ನೋಂದಣಿ

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಜ.5ರೊಳಗೆ ಮುಗಿಯುವ ಸಾಧ್ಯತೆ

ಸದಾಶಿವ ಎಂ.ಎಸ್‌.
Published 1 ಜನವರಿ 2019, 6:30 IST
Last Updated 1 ಜನವರಿ 2019, 6:30 IST

ಕಾರವಾರ: ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ಜಿಲ್ಲೆಯ ರೈತರ ಪೈಕಿ ಶೇ 81ರಷ್ಟು ಮಂದಿ ಸಾಲಮನ್ನಾ ಯೋಜನೆಗೆ ಈಗಾಗಲೇ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಟ್ಟು 5,693 ಖಾತೆಗಳು ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ 87 ಸಾವಿರ ಖಾತೆಗಳು ಸಾಲಮನ್ನಾಕ್ಕೆ ಒಳಪಡುತ್ತವೆ.

ಸಾಲದ ಕಡಿಮೆ ಖಾತೆಗಳಿರುವ ಜಿಲ್ಲೆಗಳಲ್ಲಿ ರೈತರ ಹೆಸರು ನೋಂದಣಿ, ಆಧಾರ್ ಮತ್ತು ಪಡಿತರ ಚೀಟಿಗಳ ನಕಲು ಪ್ರತಿಗಳನ್ನು ಆದಷ್ಟು ಶೀಘ್ರವೇ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಈಗಾಗಲೇ ವಾಣಿಜ್ಯ ಬ್ಯಾಂಕ್‌ಗಳಿಗೆ ಸುಮಾರು 4,500 ರೈತರು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಪಿ.ಎಂ.ಪಿಂಜರ್ಮಾಹಿತಿ ನೀಡಿದರು.

ಈ ಪ್ರಕ್ರಿಯೆಯಲ್ಲಿ ಸಿಂಡಿಕೇಟ್, ಎಸ್‌ಬಿಐ, ಕೆನರಾ, ಕೆವಿಜಿಬಿ, ವಿಜಯ ಬ್ಯಾಂಕ್‌ ಒಳಗೊಂಡಂತೆ ಒಟ್ಟು 19 ಬ್ಯಾಂಕ್‌ಗಳಿವೆ. ಸಿಂಡಿಕೇಟ್ ಬ್ಯಾಂಕ್‌, ಎಸ್‌ಬಿಐ ಮತ್ತು ಕೆವಿಜಿಬಿಗಳಲ್ಲಿ ಹೆಚ್ಚು ಖಾತೆಗಳಿವೆ. ಉಳಿದ 16 ವಾಣಿಜ್ಯ ಬ್ಯಾಂಕ್‌ಗಳಲ್ಲಿ 100ಕ್ಕಿಂತ ಕಡಿಮೆ ಸಾಲದ ಖಾತೆಗಳಿವೆ ಎಂದು ಅವರು ಹೇಳಿದರು.

ADVERTISEMENT

ಕೆನರಾ ಡಿಸಿಸಿ ಬ್ಯಾಂಕ್‌ನಲ್ಲಿ ಒಂದು ತಿಂಗಳ ಹಿಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದು, ಶೇ 90ರಷ್ಟು ರೈತರಿಂದ ದಾಖಲೆಗಳ ಸಂಗ್ರಹ ಮಾಡಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೂಡ ಜ.5ರೊಳಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ನೋಂದಣಿಯಾದ ಅರ್ಜಿಗಳು ತಹಶೀಲ್ದಾರ್ ಮಟ್ಟದಲ್ಲಿ ಪರಿಶೀಲನೆ ಆದ ಬಳಿಕ ಪರಿಹಾರ ಬಿಡುಗಡೆ ಆಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಈಗ ಬರಲು ಪುರುಸೊತ್ತಿಲ್ಲ’:ಮುಂಡಗೋಡ ಮತ್ತು ಶಿರಸಿ ಭಾಗದಲ್ಲಿ ಹೆಚ್ಚು ಅರ್ಹ ಖಾತೆಗಳಿವೆ. ಆದರೆ, ಅಲ್ಲಿನ ಹಲವು ಮಂದಿ ಗೋವಾ, ಮುಂಬೈನತ್ತ ಗುಳೆ ಹೋಗಿದ್ದಾರೆ. ಅವರಲ್ಲಿ ಕೆಲವು ರೈತರಿಗೆ ಕರೆ ಮಾಡಿದಾಗ, ‘ಹೊಸ ವರ್ಷದ ಸಂದರ್ಭದಲ್ಲಿ ಕೆಲಸ ಜಾಸ್ತಿಯಿದೆ. ಈಗ ಬರಲು ಪುರುಸೊತ್ತಿಲ್ಲ’ ಎಂದು ತಿಳಿಸಿದ್ದಾರೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಸ್ವಲ್ಪ ನಿಧಾನವಾಗಿದೆ ಎಂದು ಪಿ.ಎಂ.ಪಿಂಜರ್ ಮಾಹಿತಿ ನೀಡಿದರು.

ಜಂಟಿ ಬಾಧ್ಯತಾ ಗುಂಪು (ಜೆಎಲ್‌ಬಿ) ಬೆಳೆಸಾಲ, ಸ್ವಸಹಾಯ ಗುಂಪುಗಳ ಸಾಲಗಳು ಮನ್ನಾ ಆಗುವುದಿಲ್ಲ. ಇವು ಬಾಕಿಯಿರುವ ಶೇ 19ರಲ್ಲಿ ಸೇರಿವೆ ಎಂದು ತಿಳಿಸಿದರು.

ಇಂದಿನಿಂದ ವಿ.ಎ.ಗಳ ಭೇಟಿ:ಸಾಲಮನ್ನಾ ಯೋಜನೆಯಡಿ ಹೆಸರು ನೋಂದಾಯಿಸಲು ಬಾಕಿಯಿರುವ ರೈತರ ಮನೆಗಳಿಗೆ ಜ.1ರಿಂದ ಗ್ರಾಮ ಲೆಕ್ಕಿಗರು (ವಿ.ಎ) ಭೇಟಿ ನೀಡುತ್ತಾರೆ. ನಾನಾ ಕಾರಣಗಳಿಂದ ಬೇರೆ ಊರುಗಳಲ್ಲಿರುವ ರೈತರು ಆ ಸಂದರ್ಭದಲ್ಲಿ ಹಾಜರಿರಲೇಬೇಕು ಎಂದೇನಿಲ್ಲ. ಅವರ ಕುಟುಂಬ ಸದಸ್ಯರ ಮೂಲಕ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ದಾಖಲೆಗಳನ್ನು ನೀಡಿದರೆ ಹೆಸರು ನೋಂದಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಹೆಸರು ನೋಂದಾಯಿಸಿಕೊಳ್ಳಲು ರೈತರಿಗೆ ಗಡುವು ಕೊಟ್ಟಿಲ್ಲ. ಆದಷ್ಟು ಬೇಗ ಪ್ರಕ್ರಿಯೆ ಮುಗಿಸಿಕೊಂಡರೆ ಸರ್ಕಾರದಿಂದ ಬೇಗ ಪರಿಹಾರ ಬಿಡುಗಡೆ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.