ಬೆಂಗಳೂರು: ಬೆಂಗಳೂರು ಬಿಟ್ಟು, ರಾಜ್ಯದ ಇತರ ಹಿಂದುಳಿದ ಭಾಗಗಳಲ್ಲಿ ಉದ್ಯಮಗಳನ್ನು ಬೆಳೆಸಬೇಕೆಂದರೆ ತೆರಿಗೆ ರಜೆ, ಹೆಚ್ಚಿನ ಸಹಾಯಧನ, ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದಾದ ನೆರವು ಸೇರಿ ಸಮಗ್ರ ದೃಷ್ಟಿಕೋನದ ತುರ್ತು ಅಗತ್ಯವಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಕೈಗಾರಿಕೆಗಳು ಬೆಳೆಯಲು ಬೇಕಾದ ಕಾರ್ಯಪರಿಸರವನ್ನು ಸೃಷ್ಟಿಸಬೇಕಾಗಿದೆ. ಈ ವಿಚಾರದಲ್ಲಿ ನಾವು ನೆರೆಹೊರೆಯ ರಾಜ್ಯಗಳ ನೀತಿಗಳನ್ನು ಗಮನಿಸಿ, ದಾಪುಗಾಲಿಡಬೇಕಾದ ತುರ್ತಿದೆ’ ಎಂದು ಅವರು ಹೇಳಿದರು.
ಡಿ.ಎಂ.ನಂಜುಂಡಪ್ಪ ವರದಿಯ ಶಿಫಾರಸಿನಂತೆ ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 2007ರಿಂದ 2021ರವರೆಗೆ ₹29,422 ಕೋಟಿ ನೀಡಲಾಗಿದೆ. ಬೆಂಗಳೂರು ಬಿಟ್ಟು ಬೇರೆ ಕಡೆಗಳಲ್ಲಿ ಕೈಗಾರಿಕೆಗಳು ನೆಲೆಯೂರುವಂತೆ ಮಾಡಬೇಕಾಗಿದೆ. ಆದರೆ, ಈಗ ಇರುವ ಉಪಕ್ರಮಗಳು ಅಷ್ಟೊಂದು ಆಕರ್ಷಕವಾಗಿಲ್ಲ ಎಂದರು.
ಈಗ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ(ಝೋನ್ 1 ಮತ್ತು 2) ಉದ್ಯಮಗಳನ್ನು ಸ್ಥಾಪಿಸುವವರಿಗೆ ಶೇ 25ರಷ್ಟು ಬಂಡವಾಳ ಹೂಡಿಕೆ ಸಹಾಯಧನ ಮತ್ತು ಹೆಚ್ಚುವರಿಯಾಗಿ ಶೇ 5ರಷ್ಟು ಹೂಡಿಕೆ ಸಹಾಯಧನ, ಝೋನ್–3 ರಡಿ ಬರುವ ಪ್ರದೇಶಗಳಲ್ಲಿ ಭೂಮಿಯ ಮೇಲಿನ ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ, ಸ್ಥಳೀಯ ಯುವ ಜನರಿಗೆ ಉದ್ಯೋಗ ನೀಡಲೆಂದು ಶೇ 7.5 ರಿಂದ ಶೇ 15 ರವರೆಗೆ ಬೋನಸ್ ಸಹಾಯಧನ ನೀಡಲಾಗುತ್ತದೆ. ಆದರೆ, ಕೈಗಾರಿಕೆಗಳ ಬೆಳವಣಿಗೆಗೆ ಇಷ್ಟು ಸಾಲದು ಎಂದು ಹೇಳಿದರು.
ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನೂ ಸೇರಿಸಿಕೊಂಡಿದೆ. ಇದರಡಿ ವಿಶೇಷ ಯೋಜನೆಗಳು, ಹಿಂದುಳಿದ ಪ್ರದೇಶಗಳಿಗೆ ಮೀಸಲಾಗಿರುವ ಅನುದಾನದ ನಿಧಿ ಮತ್ತು ಹೆಚ್ಚುವರಿ ಹಣಕಾಸು ನೆರವು ಸಿಗುತ್ತದೆ ಎಂದು ಪಾಟೀಲ ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಇಲಾಖೆ ತಾಂತ್ರಿಕ ನಿರ್ದೇಶಕ ರಮೇಶ, ಸಮಿತಿ ಅಧ್ಯಕ್ಷ ಎಂ.ಗೋವಿಂದರಾವ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.