ADVERTISEMENT

ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ವಿಶೇಷ ಅಭಿಯಾನ

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 12:51 IST
Last Updated 19 ನವೆಂಬರ್ 2024, 12:51 IST
ಲಕ್ಕುಂಡಿಯ ಐತಿಹಾಸಿಕ ಜೈನ ಬಸದಿ
ಲಕ್ಕುಂಡಿಯ ಐತಿಹಾಸಿಕ ಜೈನ ಬಸದಿ   

ಬೆಂಗಳೂರು: ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿ ಸೇರಿಸುವ ಉದ್ದೇಶದಿಂದ ಅಲ್ಲಿನ ಪ್ರಾಚ್ಯ ವಸ್ತುಗಳು, ಶಾಸನಗಳು, ಮೂರ್ತಿಗಳು, ತಾಳೆಗರಿಗಳನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಇದೇ 24 ರಿಂದ ವಿಶೇಷ ಅಭಿಯಾನ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಪ್ರತಿಮೆಗಳು, ಶಿಲ್ಪಗಳು, ಕೆತ್ತೆನೆಯಿಂದ ಕೂಡಿದ ಕಂಬಗಳು ,ಶಿಲಾ ಶಾಸನಗಳು, ನಾಣ್ಯಗಳನ್ನು ಕಳೆದುಕೊಂಡಿದ್ದೇವೆ. ಕೆಲವು ಬಟ್ಟೆ ಒಗೆಯುವ ಕಲ್ಲಾಗಿದ್ದರೆ, ಮತ್ತೆ ಕೆಲವು ಜಾನುವಾರು ಕಟ್ಟು ತಾಣಗಳಾಗಿವೆ. ಆದ್ದರಿಂದ ಸ್ಥಳೀಯರಿಗೆ ಅವುಗಳ ಕುರಿತು ಮನವರಿಕೆ ಮಾಡಿ ಅವರಿಂದ ಅವೆಲ್ಲವನ್ನು ಪಡೆಯಲು ತೀರ್ಮಾನಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಲ್ಲಕ್ಕಿ ಹೊತ್ತು ಗ್ರಾಮಸ್ಥರ ಮನೆ ಮನೆಗೆ ಹೋಗಿ ತಮ್ಮ ಬಳಿ ಇರುವ ಪ್ರಾಚ್ಯ ವಸ್ತುಗಳನ್ನು ಸರ್ಕಾರಕ್ಕೆ ನೀಡುವಂತೆ ಮನವಿ ಮಾಡುತ್ತೇವೆ. ಕೆಲವು ಗುಡಿಗಳು ಮತ್ತು ದೇವಸ್ಥಾನಗಳು ಒತ್ತುವರಿ ಆಗಿವೆ. ಅವುಗಳನ್ನು ಪಡೆಯಲು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮನವರಿಕೆ ಮಾಡುತ್ತೇವೆ ಎಂದು ಪಾಟೀಲ ತಿಳಿಸಿದರು.

ADVERTISEMENT

ಲಕ್ಕುಂಡಿಯಲ್ಲಿ 101 ಗುಡಿಗಳು, 101 ಬಾವಿಗಳು, ಟಂಕಸಾಲೆ ಇರುವುದು ಗಮನಕ್ಕೆ ಬಂದಿದೆ. ಒತ್ತುವರಿ, ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಅವುಗಳನ್ನು ಕಳೆದುಕೊಂಡಿದ್ದೇವೆ. ಅವೆಲ್ಲವನ್ನು ಪಡೆದುಕೊಂಡು ಅಭಿವೃದ್ಧಿಪಡಿಸಿದಾಗಲೇ ವಿಶ್ವ ಪಾರಂಪರಿಕ ತಾಣದ ಪಟ್ಟ ಪಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಐಹೊಳೆಯಲ್ಲಿ ಒತ್ತುವರಿ ಆಗಿದ್ದ ಎಂಟು ದೇವಾಲಯಗಳನ್ನು ಬಿಡಿಸಿಕೊಳ್ಳಲು ಅವರಿಗೆ ಪರ್ಯಾಯವಾಗಿ 13 ಎಕರೆಯಲ್ಲಿ ವ್ಯವಸ್ಥೆ ಮಾಡಲಾಯಿತು, ಎಷ್ಟೋ ಶಾಸನಗಳು ಮತ್ತು ಮೂರ್ತಿಗಳು ತಿಪ್ಪೆ ಗುಂಡಿಯಲ್ಲಿವೆ. ಅವುಗಳ  ಐತಿಹಾಸಿಕ ಮಹತ್ವವನ್ನು ಜನರಿಗೆ ತಿಳಿಸಿ ಹೇಳಬೇಕಾಗಿದೆ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯ ಇಲಾಖೆ ಮತ್ತು ಜಿಲ್ಲಾ ಆಡಳಿತ ಸೇರಿ ಒಟ್ಟಿಗೆ ಕೆಲಸ ಮಾಡಲಿವೆ ಎಂದು ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.