ADVERTISEMENT

ಕೆಐಎಡಿಬಿಗೊಬ್ಬ ತಾಂತ್ರಿಕ ಸಲಹೆಗಾರ?

ನಿವೃತ್ತ ಅಧಿಕಾರಿಗಾಗಿ ಹೊಸ ಹುದ್ದೆ: ವೆಚ್ಚಕ್ಕೆ ದಾರಿ - ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 20:30 IST
Last Updated 6 ಅಕ್ಟೋಬರ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರ, ವೆಚ್ಚದ ಕಡಿತದ ದಾರಿ ಹುಡುಕುತ್ತಿದೆ. ಆದರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವೆಚ್ಚ ಹೆಚ್ಚಿಸಿಕೊಳ್ಳಲು ಮುಖ್ಯ ತಾಂತ್ರಿಕ ಸಲಹೆಗಾರರ ಹುದ್ದೆ ಸೃಷ್ಟಿಸಲು ಮುಂದಾಗಿದೆ.

ಕೆಐಎಡಿಬಿಯಲ್ಲಿ ಹಿಂದೆ ಒಂದೇ ಇದ್ದ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ– ಸಿಇ) ಹುದ್ದೆಯನ್ನು ಎರಡಕ್ಕೆ ಹೆಚ್ಚಿಸಲಾಗಿತ್ತು. ಈ ಹುದ್ದೆಯ ಮೇಲೆ ಮುಖ್ಯ ತಾಂತ್ರಿಕ ಸಲಹೆಗಾರ ಹುದ್ದೆ ಸೃಜಿಸಲು ಮುಂದಾಗಿರುವುದು ಇಲಾಖೆಯ ಅಧಿಕಾರಿಗಳ ಆಕ್ಷೇಪಕ್ಕೂ ಕಾರಣವಾಗಿದೆ.

‘ಇತ್ತೀಚೆಗಷ್ಟೇ ಮುಖ್ಯ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ನಿವೃತ್ತರಾದ ಎಂ. ರಾಮ ಅವರಿಗಾಗಿ ಈ ಹುದ್ದೆ ಸೃಷ್ಟಿಸುವ ಯತ್ನ ಉನ್ನತ ಮಟ್ಟದಿಂದಲೇ ನಡೆದಿದೆ. ಅವರ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಅನೇಕ ಟೆಂಡರ್‌ಗಳನ್ನು ನೀಡಲಾಗಿದೆ. ಅವುಗಳನ್ನು ಸಕ್ರಮಗೊಳಿಸಲು ಮತ್ತೊಂದು ಹುದ್ದೆಯಲ್ಲಿ ಬಂದು ಕೂರಲು ಉನ್ನತ ಮಟ್ಟದ ಪ್ರಭಾವ ಬಳಸುತ್ತಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಕೆಐಎಡಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ರಾಮ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ‘ರಾಮ ಅವರ ಸೇವೆ ಮಂಡಳಿಗೆಮತ್ತೆ ಬೇಕಾಗಿದೆ. ಯಾವುದಾದರೂ ರೂಪದಲ್ಲಿ ಅವರ ಸೇವೆ ಮುಂದುವರಿಯಲಿದೆ‘ ಎಂದು ಪ್ರತಿಪಾದಿಸಿದ್ದರು. ರಾಮ ಪ್ರಯತ್ನ ನಡೆಸಿರುವುದಕ್ಕೆ ಇದು ಸಾಕ್ಷಿ’ ಎಂದು ಅವರು ಹೇಳಿದರು.

ರಾಮ ವಿರುದ್ಧ ಆರೋಪ: ‘ಶಿರಾ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ₹100 ಕೋಟಿ ಕಾಮಗಾರಿಯನ್ನು ತಾಂತ್ರಿಕ ಪರಿಣತಿ ಇಲ್ಲದ, ಷರತ್ತುಗಳ ಅನ್ವಯ ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ನೀಡಲಾಗಿದೆ. ಪ್ರವಾಹ ಪರಿಹಾರದಂತಹ ತುರ್ತು ಇಲ್ಲದ ಕಾಮಗಾರಿಗಳಿಗೆ 60 ದಿನಗಳ ಗಡುವು ನೀಡಬೇಕು. ಆದರೆ, ₹50 ಕೋಟಿ ಮೊತ್ತದ ಎರಡು ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ತರಾತುರಿಯಲ್ಲಿ ಇದನ್ನು ಮುಗಿಸುವ ಉದ್ದೇಶದಿಂದ ನಿಯಮ ಉಲ್ಲಂಘಿಸಲಾಗಿದೆ. ಚಿಕ್ಕೋಡಿಯ ಕಾಮಗಾರಿಯನ್ನು ತಡೆಹಿಡಿಯಬೇಕು ಎಂದು ಶಾಸಕರೊಬ್ಬರ ಪತ್ರ ಆಧರಿಸಿ ಮುಖ್ಯಮಂತ್ರಿಗಳೇ ಸೂಚಿಸಿದ್ದರು. ಅದು ಈವರೆಗೂ ಜಾರಿಯಾಗಿಲ್ಲ. ಈ ಎಲ್ಲ ಉದ್ದೇಶದಿಂದ ರಾಮ ಇಲ್ಲಿಗೆ ಬರಲು ಯತ್ನ ನಡೆಸಿದ್ದಾರೆ’ ಎಂದುಅವರು ದೂರಿದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಶಿವಶಂಕರ್ ಹಾಗೂ ರಾಮ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.

1 ಎಲ್‌ಇಡಿ ಬಲ್ಬ್‌ಗೆ ₹52 ಸಾವಿರ!

ಒಂದು ಎಲ್ಇಡಿ ಬಲ್ಬ್‌ಗೆ ₹52,890ದಂತೆ ನೀಡಿ, 334 ಬಲ್ಬ್‌ ಖರೀದಿಸಿದ ಪವಾಡವೂ ಕೆಐಎಡಿಬಿಯಲ್ಲಿ ನಡೆದಿದೆ.

ದೇವನಹಳ್ಳಿಯ ಕೈಗಾರಿಕಾ ಪಾರ್ಕ್‌ನಲ್ಲಿ ರಸ್ತೆ ಬದಿ ದೀಪ ಅಳವಡಿಸಲು ಹೀಗೆ ದುಂದುವೆಚ್ಚ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈ ಬಲ್ಬ್‌ಗೆ ಕನಿಷ್ಠ ₹5 ಸಾವಿರದಿಂದ ಗರಿಷ್ಠ ₹24 ಸಾವಿರ ಇದೆ. ದೀಪ ಅಳವಡಿಸುವ ಕಂಬಕ್ಕೆ ₹21,055, ದೀಪದ ಕವಚಕ್ಕೆ ₹3,394 ವೆಚ್ಚ ಮಾಡಲಾಗಿದೆ. ಆದರೆ, ಯಾವುದೇ ಟೆಂಡರ್‌ ಕರೆಯದೇ, ದುಪ್ಪಟ್ಟು ಬೆಲೆ ನೀಡಲಾಗಿದೆ. ಇದಕ್ಕಾಗಿ ಸುಮಾರು ₹5 ಕೋಟಿ ಖರ್ಚು ಮಾಡಲಾಗಿದೆ.

‘ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಎಂ. ರಾಮ ಮುತುವರ್ಜಿ ವಹಿಸಿ ಈ ಕಾಮಗಾರಿಗೆ ಒಪ್ಪಿಗೆ ನೀಡಿದ್ದರು. ದುಂದುವೆಚ್ಚದ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಲಾಗಿತ್ತು. ಆದರೆ, ಏನೂ ಪ್ರಗತಿಯಾಗಿಲ್ಲ. ಈಗ ರಾಮ ಅವರನ್ನೇ ಮುಖ್ಯ ತಾಂತ್ರಿಕ ಸಲಹೆಗಾರ ಹುದ್ದೆಗೆ ತರುವ ಯತ್ನ ನಡೆದಿದೆ’ ಎಂದು ಕೆಐಎಡಿಬಿಯ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.