ರಾಯಚೂರು: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಕೇಂದ್ರವೊಂದನ್ನು ರಾಯಚೂರಿನಲ್ಲಿ ಆರಂಭಿಸುವಂತೆ ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿಯು ಆರಂಭಿಸಿರುವ ನಿರಂತರ ಧರಣಿ ಬುಧವಾರ 13ನೇ ದಿನಕ್ಕೆ ಕಾಲಿರಿಸಿದೆ. ಧರಣಿಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ಬೆಂಬಲಿಸಿದ್ದು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
‘ಏಮ್ಸ್ ರಾಯಚೂರಿನಲ್ಲಿ ಆರಂಭವಾಗದಿರಲು ಈ ಭಾಗದ ರಾಜಕೀಯ ನಾಯಕರೇ ಕಾರಣ. ಇಲ್ಲಿನ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಶಾಸಕರು ಮತ್ತು ಸಂಸದರು ತಲುಪಿಸುತ್ತಿಲ್ಲ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.
‘ಐಐಟಿಯನ್ನು ಸರ್ಕಾರ ಈಗಾಗಲೇ ಕೈತಪ್ಪಿಸಿದೆ. ಈಗ ಏಮ್ಸ್ ಕೂಡ ಬೇರೆಡೆ ಒಯ್ಯಲಾಗುತ್ತಿದೆ. ರಾಯಚೂರು ಏಮ್ಸ್ ಹೋರಾಟ ಸಮಿತಿಯ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ಆರಂಭಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.