ic
ಬೆಂಗಳೂರು: ಅಬಕಾರಿ ಇಲಾಖೆಯ ಹುದ್ದೆಗಳನ್ನು ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕೇತರವೆಂದು ವಿಂಗಡಿಸಿ, ಅಬಕಾರಿ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಲು ಹಾಗೂ ಅಧಿಕಾರಿಗಳ ಕಡ್ಡಾಯ ವರ್ಗಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಈ ಉದ್ದೇಶದಿಂದ ಆರ್ಥಿಕ ಇಲಾಖೆಯು (ಅಬಕಾರಿ) ‘ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು– 2025 ಸಿದ್ಧಪಡಿಸಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವ ಮಂಡನೆ ಆಗಲಿದೆ.
ಅಬಕಾರಿ ಇಲಾಖೆಯಲ್ಲಿ ಆಯಕಟ್ಟಿನ ಜಾಗಗಳಿಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಭಾವ ಬೀರುವ, ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿ ಬಂದ ಬೆನ್ನಲ್ಲೆ, ಅದಕ್ಕೆ ಕಡಿವಾಣ ಹಾಕಲು ವರ್ಗಾವಣೆ ನಿಯಮವನ್ನೇ ಬದಲಿಸಲು ಸರ್ಕಾರ ನಿರ್ಧರಿಸಿದೆ.
ಅಬಕಾರಿ ಇಲಾಖೆಯು ಸಮವಸ್ತ್ರ ಆಧಾರಿತ ಮತ್ತು ನಿಯಂತ್ರಕ ಇಲಾಖೆ. ಹೀಗಾಗಿ, ಪಾರದರ್ಶಕ, ನಿರ್ದಿಷ್ಟ ಗುರಿ ಹೊಂದಿದ ಮತ್ತು ನಿಯಮಾಧಾರಿತ ವರ್ಗಾವಣೆ ಪದ್ಧತಿಯನ್ನು ಜಾರಿಗೊಳಿಸಿದರೆ ಅಧಿಕಾರಿಗಳು ಮತ್ತು ನೌಕರರು ಇತರ ಪ್ರಭಾವಗಳಿಗೆ ಒಳಗಾಗುವುದನ್ನು ತಡೆಯಬಹುದು. ಅಲ್ಲದೆ, ಇಂತಹ ಪ್ರಕ್ರಿಯೆಯಿಂದ ಯಾವುದೇ ಭಯ ಮತ್ತು ಪ್ರಭಾವಕ್ಕೆ ಒಳಗಾಗದೆ ತಮ್ಮ ಕರ್ತವ್ಯಗಳನ್ನು ಸಿಬ್ಬಂದಿ ನಿಭಾಯಿಸಲು ಅನುಕೂಲ ಆಗಬಹುದು ಎಂದು ಸಚಿವ ಸಂಪುಟ ಸಭೆಗೆ ಮಂಡಿಸಿದ ಪ್ರಸ್ತಾವದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.