ADVERTISEMENT

ಮನುಷ್ಯ ಪ್ರೀತಿ ಕಟ್ಟಿಕೊಟ್ಟ ಕಥೆಗಾರ

ಶಿಷ್ಯರ ಪಾಲಿನ ಪ್ರೀತಿಯ ಶಿಕ್ಷಕ ಅಬ್ಬಾಸ್‌ ಮೇಲಿನಮನಿ

ವೆಂಕಟೇಶ ಜಿ.ಎಚ್.
Published 22 ಸೆಪ್ಟೆಂಬರ್ 2020, 11:46 IST
Last Updated 22 ಸೆಪ್ಟೆಂಬರ್ 2020, 11:46 IST
ಅಬ್ಬಾಸ್ ಮೇಲಿನಮನಿ
ಅಬ್ಬಾಸ್ ಮೇಲಿನಮನಿ   

ಬಾಗಲಕೋಟೆ: ಬಾಲ್ಯದ ಬವಣೆ, ಬಿಕ್ಕಳಿಕೆಗಳಿಗೆ ಅಕ್ಷರ ರೂಪ ನೀಡುತ್ತಾ, ಊರ ಪರಿಸರದಲ್ಲಿ ತಾವು ಕಂಡುಂಡ ಆರ್ದ್ರ ಅನುಭವ, ತಲ್ಲಣಗಳನ್ನು ಕಥನರೂಪದಲ್ಲಿ ಕಟ್ಟಿಕೊಟ್ಟ ಅಬ್ಬಾಸ್ ಮೇಲಿನಮನಿ ಕನ್ನಡ ಸಾರಸ್ವತ ಲೋಕ ಕಂಡ ಬೆರುಗಿನ ಕಥೆಗಾರ.

ಬಾಗಲಕೋಟೆಯ ಹಳೆಯ ನಗರಸಭೆ ಬಳಿಯ ನಿವಾಸಿ ಹುಸೇನ್‌ಸಾಬ್‌– ನೂರ್‌ಜಹಾನ್ ದಂಪತಿ ಪುತ್ರ ಅಬ್ಬಾಸ್ ಅವರಿಗೆ ಎಳವೆಯಲ್ಲಿ ಬಳುವಳಿಯಾಗಿ ಬಂದದ್ದು ಬಡತನ. ಜೊತೆಗೊಂದಷ್ಟು ಸಾಮಾಜಿಕ ಅಪಮಾನ. 10ನೇ ವಯಸ್ಸಿನಲ್ಲಿ ಶಾಲೆಗೆ ಹೋಗಲು ಆರಂಭಿಸಿದ ಅವರಿಗೆ ಅಕ್ಷರ ಕಲಿಕೆ ಎಲ್ಲ ಸಂಕಷ್ಟಗಳನ್ನು ಮೀರುವ ಶಕ್ತಿಧಾತುವಾಯಿತು.

ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ಅವರು ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂಎ ಪದವಿ ಪಡೆದಿದ್ದರು. ಬಹಳಷ್ಟು ವರ್ಷ ಗುಳೇದಗುಡ್ಡ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಪಿಯು ಕಾಲೇಜು ಉಪನ್ಯಾಸಕರಾಗಿ ಬಡ್ತಿ ಪಡೆದು ಇಳಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ADVERTISEMENT

ಕಥೆ, ಕಾದಂಬರಿ, ಕಾವ್ಯ, ನಾಟಕ, ವೈಚಾರಿಕ ಸಾಹಿತ್ಯದಲ್ಲಿ ಕೃಷಿ ನಡೆಸಿದ್ದ ಅವರು, ತಮ್ಮ ಬರಹಗಳಲ್ಲಿ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಯಾವ ಗೋಜಲು ಇಲ್ಲದೇ ಆಪ್ತವಾಗಿ ಕಟ್ಟಿಕೊಡುತ್ತಿದ್ದರು. ಮನುಷ್ಯ ಪ್ರೀತಿಯ ಓಘದ ಹುಡುಕಾಟವೇ ಅವರ ಕವನ, ಕಥೆಗಳ ಮೂಲಾಧಾರವಾಗಿರುತ್ತಿತ್ತು. ಅವರ ಮೊದಲ ಕಥಾ ಸಂಕಲನ ‘ಪ್ರೀತಿಸಿದವರು’ ಮೊದಲುಗೊಂಡು ಇತ್ತೀಚಿನ ’ಬನದ ಹುಣ್ಣಿಮೆ‘ ಸುತ್ತಲಿನ ಪರಿಸರದ ಜೀವಪರತೆಯ ಸಾಕಾರವೇ ಆಗಿವೆ.

ಪತ್ನಿ ಮಾಲನ್‌ಬಿ, ಪುತ್ರ ಆಸೀಫ್ ಅವರೊಂದಿಗೆ ನವನಗರದ ಸೆಕ್ಟರ್ 3ರಲ್ಲಿ ನೆಲೆಸಿದ್ದ ಪ್ರೊ.ಅಬ್ಬಾಸ್್ ಮೇಲಿನಮನಿ, ಚಿತ್ರದುರ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿ ಆಗಿರುವ ಪುತ್ರಿ ಡಾ.ಆಸ್ಮಾ ಅವರ ಮನೆಗೆ ತೆರಳಿದ್ದರು.

‘ಬಾಣಂತನಕ್ಕೆಂದು ತವರಿಗೆ ಬಂದಿದ್ದ ಮಗಳನ್ನು ಬಿಟ್ಟು ಬರಲು ಚಿತ್ರದುರ್ಗಕ್ಕೆ ತೆರಳಿದ್ದ ಅಬ್ಬಾಸ್್, ಅಲ್ಲಿ ಕೆಲ ದಿನ ಇದ್ದು ಬರುವುದಾಗಿ ಹೇಳಿದ್ದರು. ಗದ್ದನಕೇರಿಯ ಮಳೆ ರಾಜೇಂದ್ರ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಮಿತ್ತ ಭಾನುವಾರವಷ್ಟೇ ಅವರೊಂದಿಗೆ ಮಾತನಾಡಿದ್ದೆ, ಇಂದು ಅವರಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ’ ಎಂದು ಮಿತ್ರ ಮೈನುದ್ದೀನ್ ರೇವಡಿಗಾರ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.