ADVERTISEMENT

‘ಲಂಚದ ಹಣ’ ಪ್ರಕರಣಕ್ಕೆ ಹೊಸ ತಿರುವು

ಸಚಿವರ ಕಚೇರಿಯಿಂದ ಹೊರಗೆ ಹಾಕಿದ್ದ ನೌಕರರಿಂದಲೇ ‘ಪಿತೂರಿ’: ಗುತ್ತಿಗೆದಾರರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:27 IST
Last Updated 10 ಜನವರಿ 2019, 20:27 IST

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಅವರ ಟೈಪಿಸ್ಟ್‌ ಬಳಿ ಪತ್ತೆಯಾದ ₹25.76 ಲಕ್ಷ ‘ಲಂಚದ ಹಣ ಪ್ರಕರಣ’ ಇದೀಗ ಹೊಸ ತಿರುವು ಪಡೆದಿದೆ.

ಸಚಿವರಿಗೆ ಕೊಡಬೇಕಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದ ಆರೋಪದ ಮೇಲೆ ಹೊರಹಾಕಲ್ಪಟ್ಟಿದ್ದ ನೌಕರರಿಬ್ಬರ ‘ಪಿತೂರಿ’ಯಿಂದಾಗಿ ಎಸ್‌.ಜೆ. ಮೋಹನ್‌ ಕುಮಾರ್‌ ಹಣದ ಸಹಿತ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಸಚಿವರ ಕಚೇರಿಯಲ್ಲಿ ಮಂಜು ಮತ್ತು ಕೃಷ್ಣಪ್ಪ ಎಂಬ ನೌಕರರಿದ್ದರು. ಸಚಿವರ ಪರವಾಗಿ ‘ವ್ಯವಹಾರ’ ನಡೆಸುತ್ತಿದ್ದ ಇವರನ್ನು ಹಣ ಸರಿಯಾಗಿ ನಿರ್ವಹಿಸಿಲ್ಲ ಎಂಬ ಆರೋಪದ ಮೇಲೆ ಹೊರಹಾಕಲಾಗಿತ್ತು. ಅವರ ಜಾಗಕ್ಕೆ ಬಂದ ಮೋಹನ್‌ ಕುಮಾರ್‌ ಅವರಿಗೂ ಅದೇ ಹೊಣೆ ನೀಡಲಾಗಿತ್ತು. ಇದರಿಂದ ಅತೃಪ್ತಗೊಂಡಿದ್ದ ಇವರಿಬ್ಬರೂ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದರು. ಈ ಪ್ರಕರಣ ಅವರಿಗೆ ವರವಾಗಿ ಪರಿಣಮಿಸಿತು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ ಗೆ ತಿಳಿಸಿವೆ.

ADVERTISEMENT

ಮೋಹನ್‌ ಕುಮಾರ್‌ಗೆಸಚಿವರ ಬಳಿ ಕೆಲಸ ಮಾಡಿಸಿಕೊಡಲು ಹಣ ಕೊಟ್ಟ ನಂದ, ಅನಂತು, ಶ್ರೀನಿಧಿ ಮತ್ತು ಕೃಷ್ಣಮೂರ್ತಿ ಅವರ ಜೊತೆ ಮಂಜು ಹಾಗೂ ಕೃಷ್ಣಪ್ಪ ಅವರು ಸೇರಿಕೊಂಡು ಈ ಯೋಜನೆ ರೂಪಿಸಿದ್ದಾರೊ ಅಥವಾ ಗುತ್ತಿಗೆದಾರರು ಹಣ ಕೊಡುವುದು ಗೊತ್ತಾಗಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೊ ಎಂಬ ಸಂಗತಿ ವಿಚಾರಣೆಯಿಂದ ಬಹಿರಂಗವಾಗಬೇಕಿದೆ.

ನಾಲ್ವರು ಗುತ್ತಿಗೆದಾರರು ತಲೆಮರೆಸಿಕೊಂಡಿದ್ದು ಮೋಹನ್‌ ಕುಮಾರ್‌, ಮಂಜು ಹಾಗೂ ಕೃಷ್ಣಪ್ಪ ವಿಚಾರಣೆ ನಡೆಯುತ್ತಿದೆ. ಬಂಧಿತ ಮೋಹನ್‌ ಕುಮಾರ್‌ ಎಸಿಬಿ ಅಧಿಕಾರಿಗಳ ವಶದಲ್ಲಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಹಾಜರುಪಡಿಸಲಾಗುತ್ತಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮಂಜು ಮತ್ತು ಕೃಷ್ಣಪ್ಪ ಅವರಿಗೆ ಪುನಃ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

ಅಲೆಮಾರಿ ಅಭಿವೃದ್ಧಿ ನಿಗಮ ಶೋಧ: ಈ ಮಧ್ಯೆ, ಅಲೆಮಾರಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶೋಧನೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲೆಮಾರಿ ಸಮುದಾಯಗಳ ಕಾಲೋನಿಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ಗುತ್ತಿಗೆದಾರರು ಅನುದಾನ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ. ಜಿಲ್ಲಾಧಿಕಾರಿಗಳಿಗೆ ಈ ಅನುದಾನ ಬಿಡುಗಡೆ ಆಗುತ್ತದೆ. ಆನಂತರ ಸಚಿವರ ಬಳಿ ಗುತ್ತಿಗೆದಾರರು ಬಂದು ತಮಗೇ ಗುತ್ತಿಗೆ ನೀಡುವಂತೆ ಶಿಫಾರಸು ಪತ್ರಗಳನ್ನು ಕೊಂಡೊಯ್ಯುತ್ತಾರೆ. ಶಿಫಾರಸು ಪತ್ರಗಳನ್ನು ಸಚಿವ ಪುಟ್ಟರಂಗಶೆಟ್ಟಿ ನೀಡಿದ್ದಾರೆ ಎನ್ನಲಾಗಿದೆ.

‘ಸಚಿವರ ವಿಚಾರಣೆಗೆ ಮಹೂರ್ತ ನಿಗದಿ ಆಗಿಲ್ಲ’

ಮೋಹನ್‌ ಕುಮಾರ್‌ ಅವರ ಬಳಿ ಪತ್ತೆಯಾದ ಹಣದ ಬಗ್ಗೆ ಸಚಿವ ಪುಟರಂಗ ಶೆಟ್ಟಿ ಅವರಿಂದ ಹೇಳಿಕೆ ಪಡೆಯಲು ಎಸಿಬಿ ಅಧಿಕಾರಿಗಳು ನಿರ್ಧರಿಸಿದ್ದು, ಅವರನ್ನು ಕರೆಸುವ ಸಮಯವನ್ನು ಇನ್ನೂ ನಿಗದಿ ಮಾಡಿಲ್ಲ.

ಪ್ರಮುಖ ಆರೋಪಿ ಮೋಹನ್‌ ಕುಮಾರ್‌, ಸಚಿವರ ಕಚೇರಿಯಿಂದ ಹೊರಹಾಕಲ್ಪಟ್ಟ ಮಂಜುನಾಥ್‌, ಕೃಷ್ಣಪ್ಪ, ನಾಲ್ವರು ಗುತ್ತಿಗೆದಾರರ ವಿಚಾರಣೆ ಮುಗಿದ ಬಳಿಕ ಪುಟ್ಟರಂಗಶೆಟ್ಟಿ ಅವರನ್ನು ಕರೆಸುವುದಾಗಿ ಎಸಿಬಿ ಮೂಲಗಳು ತಿಳಿಸಿವೆ.

ಈ ಪ್ರಕರಣದಿಂದ ಸಚಿವರನ್ನು ಪಾರು ಮಾಡುವಂತೆ ಎಸಿಬಿ ಅಧಿಕಾರಿಗಳ ಮೇಲೆ ಒತ್ತಡ ಬರುತ್ತಿಲ್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.