ADVERTISEMENT

ಪತ್ರಕರ್ತೆಯರ ಅಹವಾಲು ಸ್ವೀಕರಿಸಿ ಮಾನಸಿಕ ಸ್ಥೈರ್ಯ ತುಂಬಿದ  ಡಿಸಿಎಂ

​ಪ್ರಜಾವಾಣಿ ವಾರ್ತೆ
Published 14 ಮೇ 2020, 13:42 IST
Last Updated 14 ಮೇ 2020, 13:42 IST
ಪತ್ರಕರ್ತೆಯರ ಅಹವಾಲು ಸ್ವೀಕರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಪತ್ರಕರ್ತೆಯರ ಅಹವಾಲು ಸ್ವೀಕರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ   

ಬೆಂಗಳೂರು: ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ಪತ್ರಕರ್ತೆಯರ ಅಹವಾಲುಗಳನ್ನು ಗುರುವಾರ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಸ್ವೀಕರಿಸಿ, ಮಾನಸಿಕ ಸ್ಥೈರ್ಯ ತುಂಬಿದರು.

ಲಾಕ್ ಡೌನ್ ಹಿನ್ನೆಲೆಯಿಂದ ಪತ್ರಕರ್ತೆಯರು ಬಾಧಿತರಾಗಿದ್ದು, ಅವರಿಗೆ ಸರ್ಕಾರ ನೆರವಾಗಬೇಕು. ಅನಿವಾರ್ಯವಾಗಿ ಇತರೆ ವೃತ್ತಿಪರರಂತೆ ಪತ್ರಕರ್ತೆಯರು ಮನೆಯಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪೂರಕ ಪರಿಕರಗಳನ್ನು ಒದಗಿಸಬೇಕು. ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಕಾರ್ಯಾಗಾರ, ಶಿಬಿರ, ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘವು ಆಯೋಜಿಸಲು ಸಮಾಜ ಕಲ್ಯಾಣ ಇಲಾಖೆಯು ಸಹಭಾಗಿತ್ವ ನೀಡಬೇಕು. ವೃತ್ತಿ ಪರ ಕೌಶಲ ಅಭಿವೃದ್ಧಿ ಕಾರ್ಯಾಗಾರ, ಕೋರ್ಸುಗಳನ್ವಯ ವೃತ್ತಿಪರ ಕೋರ್ಸುಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಬೇಕು. ಅಗತ್ಯ ಬೆಂಬಲ ನೀಡಿದರೆ ಪತ್ರಕರ್ತೆಯರು ಮುಂಬರುವ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ನೀಡಿದ ಮನವಿಗೆ ಡಿಸಿಎಂ ಪೂರಕವಾಗಿ ಸ್ವಂದಿಸಿದರು.

'ಪತ್ರಕರ್ತೆಯರು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಕಾರ್ಯಾಗಾರಗಳನ್ನು ಆಯೋಜಿಸಲು ನೆರವು ನೀಡಲಾಗುತ್ತದೆ. ಸಂಘದ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು' ಎಂದು ಅವರು ತಿಳಿಸಿದರು.

ADVERTISEMENT

ಸಂಘದ ಹಿರಿಯ ಸಲಹೆಗಾರರಾದ ಕೆ.ಎಚ್.ಸಾವಿತ್ರಿ ಸುರೇಶ್ ಕುಮಾರ್, ಅಧ್ಯಕ್ಷರಾದ ಶಾಂತಲಾ ಧರ್ಮರಾಜ್ ಅವರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಆಯುಕ್ತ ಪೆದ್ದಪ್ಪಯ್ಯ, ಹೆಚ್ಚುವರಿ ನಿರ್ದೇಶಕ ನಾಗೇಶ್, ಸಂಘದ ಕಾರ್ಯದರ್ಶಿ ಮಾಲತಿ ಭಟ್, ಎನ್ ವನಿತಾ, ಸೌಮ್ಯಶ್ರೀ, ಅಕ್ಷರ, ಗೋರೂರು ಪಂಕಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.