ADVERTISEMENT

ಕಾಲ್ತುಳಿತಕ್ಕೆ ಹೊಣೆ: 3 ವರ್ಷ ಜೈಲು

ಬೃಹತ್‌ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿರ್ವಹಿಸಿ, ನಿಯಂತ್ರಿಸುವ ಕಾನೂನು ಜಾರಿಗೆ ಕರಡು ಮಸೂದೆ ಸಿದ್ಧ

ರಾಜೇಶ್ ರೈ ಚಟ್ಲ
Published 14 ಜೂನ್ 2025, 18:52 IST
Last Updated 14 ಜೂನ್ 2025, 18:52 IST
<div class="paragraphs"><p>ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ</p></div>

ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ

   

ಪಿಟಿಐ

ಬೆಂಗಳೂರು: ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟ ಬೆನ್ನಲ್ಲೆ, ಬೃಹತ್‌ ರಾಜಕೀಯ ರ‍್ಯಾಲಿ, ದೊಡ್ಡ ಸಮಾವೇಶ, ಸಾಮೂಹಿಕ ಸಮಾರಂಭಗಳಿಗೆ ಸೇರುವ ಜನಸಾಗರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ನಿಯಂತ್ರಿಸುವ ಉದ್ದೇಶದಿಂದ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ‌ ನಿರ್ಧರಿಸಿದೆ.

ADVERTISEMENT

ಈ ಕಾನೂನು ಜಾರಿಗೆ ಬಂದರೆ, ಬೃಹತ್‌ ಕಾರ್ಯಕ್ರಮ ಆಯೋಜಿಸಿ ಕಾಲ್ತುಳಿದಂಥ ಘಟನೆ ಸಂಭವಿಸಿ ಸಾವುನೋವು, ದೈಹಿಕವಾಗಿ ಗಾಯಕ್ಕೆ ಕಾರಣರಾದರೆ, ಕಾರ್ಯಕ್ರಮಗಳ ಆಯೋಜಕರು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಲ್ಲದೆ, ₹ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ. ಜತೆಗೆ, ಇಂತಹ ಘಟನೆಯು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲು ಮತ್ತು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಒಳಪಡಿಸಲು ಉದ್ದೇಶಿತ ಕಾನೂನು ಅವಕಾಶ ಕಲ್ಪಿಸಲಿದೆ.

ಕಾನೂನು ರೂಪಿಸುವ ಉದ್ದೇಶದಿಂದ ಕಾನೂನು ಮತ್ತು ಸಂಸದೀಯ ಇಲಾಖೆಯು ‘ಕರ್ನಾಟಕ ಜನಸಂದಣಿ ನಿಯಂತ್ರಣ (ಸಾಮೂಹಿಕ ಸಭೆ, ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ಮಸೂದೆ– 2025’ರ ಕರಡು ಸಿದ್ಧಪಡಿಸಿದೆ. ಕರಡು ಮಸೂದೆಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಮುಂದಿನ ಅಧಿವೇಶನದಲ್ಲಿ ಆಡಳಿತ ಇಲಾಖೆಯಾದ ಗೃಹ ಇಲಾಖೆಯು ಈ ಮಸೂದೆಯನ್ನು ಮಂಡಿಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಪೊಲೀಸರ ಆದೇಶ ಪಾಲನೆ ಅನಿವಾರ್ಯ

ಪೊಲೀಸರ ಆದೇಶಗಳನ್ನು ಪಾಲಿಸದ ಅಥವಾ ಈ ಕಾಯ್ದೆಯ ಷರತ್ತುಗಳನ್ನು ಅಥವಾ ನಿಯಮಗಳನ್ನು ಉಲ್ಲಂಘಿಸುವ ಆಯೋಜಕರಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ಈ ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಕ್ರೀಡೆ, ಸರ್ಕಸ್ ಮುಂತಾದ ವಾಣಿಜ್ಯ ಉದ್ದೇಶಕ್ಕೆ ಜನಸಮೂಹವನ್ನು ಒಟ್ಟುಗೂಡಿಸುವ ಕಾರ್ಯಕ್ರಮಗಳ ಆಯೋಜಕರು ಜನಸ್ತೋಮವನ್ನು ನಿಯಂತ್ರಿಸಲು ವಿಫಲವಾದರೆ, ಏನಾದರು ಘಟನೆ ಸಂಭವಿಸಿ ಪರಿಹಾರ‌ ನೀಡಲು ವಿಫಲವಾದರೆ ಅಥವಾ ಕಾಯ್ದೆಯಲ್ಲಿರುವ ಷರತ್ತು, ನಿಯಮಗಳನ್ನು ಉಲ್ಲಂಘಿಸಿದವರಿಗೂ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಕಾರ್ಯಕ್ರಮ ನಡೆದ ಸ್ಥಳದಲ್ಲಿ ಅಪರಾಧ ಎಸಗಲು ನೆರವು ಅಥವಾ ಪ್ರೋತ್ಸಾಹ ನೀಡಿದರೂ ಅಪರಾಧವೆಂದು ಪರಿಗಣಿಸಲಾಗುವುದು. ಅಂಥವರೂ ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ ಎಂದೂ ಈ ಮಸೂದೆಯಲ್ಲಿದೆ.

ರಾಜಕೀಯ ರ‍್ಯಾಲಿ, ಸಮ್ಮೇಳನದ ವೇಳೆ ಸಂಭವಿಸುವ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ಅಥವಾ ಮೃತರ ಕುಟುಂಬದ ಸದಸ್ಯರಿಗೆ ಪರಿಹಾರ ಪಾವತಿಸಲು ಕಾರ್ಯಕ್ರಮ ಆಯೋಜಕರು ಹೊಣೆಗಾರರಾಗಿರುತ್ತಾರೆ. ಕಾರ್ಯಕ್ರಮ ಆಯೋಜಕರು ಪರಿಹಾರವನ್ನು ಪಾವತಿಸದಿದ್ದರೆ, ರಾಜ್ಯ ಸರ್ಕಾರವು ಭೂ ಕಂದಾಯದ ಬಾಕಿಯಾಗಿ ಪರಿಹಾರ ಮೊತ್ತ ವಸೂಲಿ ಮಾಡಬಹುದು. ಪರಿಹಾರ ನೀಡದ ಕಾರ್ಯಕ್ರಮದ ಆಯೋಜಕರ ಆಸ್ತಿಯನ್ನೂ ಸರ್ಕಾರ ಹರಾಜು ಹಾಕಬಹುದು ಎಂದೂ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಜಿಲ್ಲಾಧಿಕಾರಿಗೆ ಅಧಿಕಾರ

‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ– 2023’ ರ ನಿಬಂಧನೆಗಳಿಗೆ ಯಾವುದೇ ಧಕ್ಕೆ ಆಗದಂತೆ ಜಿಲ್ಲಾ ಮಾಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿನ ಯಾವುದೇ ಸ್ಥಳದಲ್ಲಿ, ಈ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿವಿಧ ಗುಂಪುಗಳು, ಜಾತಿಗಳು ಅಥವಾ ಸಮುದಾಯಗಳ ಸದಸ್ಯರ ನಡುವೆ ಶಾಂತಿ ಭಂಗ ಅಥವಾ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಭೀತಿ ಇದೆ ಎಂದು ಅರಿವಾದರೆ, ಲಿಖಿತ ಆದೇಶದ ಮೂಲಕ ಕಾರ್ಯಕ್ರಮ ನಿಷೇಧಿಸಲೂ ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಒಂದು ಸಮುದಾಯ, ಜಾತಿ ಅಥವಾ ಗುಂಪು ಮತ್ತೊಂದು ಸಮುದಾಯ, ಜಾತಿ ಅಥವಾ ಗುಂಪಿನ ವಿರುದ್ಧ ಬೆದರಿಸುವ, ಬೆದರಿಕೆ ಹಾಕುವ ಅಥವಾ ದ್ವೇಷ ಭಾವನೆ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಅಥವಾ ಅಂತಹ ಘಟನೆಯು ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ ಸಾವು ಅಥವಾ ದೈಹಿಕ ಗಾಯ ಉಂಟುಮಾಡಬಹುದು ಎಂದು ಜಿಲ್ಲಾಧಿಕಾರಿಗೆ ಅನಿಸಿದರೆ, ಕಾರ್ಯಕ್ರಮವನ್ನು ನಿಷೇಧಿಸಬಹುದು ಎಂದೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಅನುಮತಿ ಹೇಗೆ?

l ಕಾರ್ಯಕ್ರಮವನ್ನು ಆಯೋಜಿಸುವವರು ನಿಗದಿತ ಸಮಯಕ್ಕೂ ಮೊದಲು, ಭಾಗವಹಿಸುವವರ ಅಂದಾಜು ಜನರ ವಿವರಗಳೊಂದಿಗೆ ಆ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಅರ್ಜಿ ಸಲ್ಲಿಸಬೇಕು.

l ಪೊಲೀಸ್ ಠಾಣೆಯು ಷರತ್ತುಗಳನ್ನು ವಿಧಿಸಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಹುದು.

l ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟು, ಕಾರಣಗಳನ್ನು ನೀಡುವ ಮೂಲಕ ದಿನ, ಸಮಯ ಅಥವಾ ಸ್ಥಳವನ್ನು ಪೊಲೀಸ್‌ ಅಧಿಕಾರಿಗಳು ಬದಲಾಯಿಸಬಹುದು.‌

l ತುರ್ತು ಸಂದರ್ಭದಲ್ಲಿ ಷರತ್ತುಗಳನ್ನು ವಿಧಿಸಿ ನಿಗದಿತ ಕಾರ್ಯಕ್ರಮವನ್ನು ರದ್ದುಗೊಳಿಸಬಹುದು ಅಥವಾ ಮುಂದೂಡಬಹುದು ಅಥವಾ ಕಾರ್ಯಕ್ರಮ ನಡೆಯುವ ಸ್ಥಳವನ್ನು ಸಂಪೂರ್ಣವಾಗಿ ಬದಲಾಯಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.