ADVERTISEMENT

ಆ್ಯಸಿಡ್‌ ದಾಳಿ ಸಂತ್ರಸ್ತೆಯರಿಗೆ ವಸತಿ, ಆರ್ಥಿಕ ನೆರವು: ಮುಖ್ಯಮಂತ್ರಿ ಘೋಷಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 21:45 IST
Last Updated 13 ಮೇ 2022, 21:45 IST
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ವಿವಿಧ ನೆರವು ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆ್ಯಸಿಡ್‌ ದಾಳಿ ಸಂತ್ರಸ್ತೆಯರು ಮತ್ತು ಅವರ ಕುಟುಂಬದವರು ನಮಸ್ಕರಿಸಿ, ಧನ್ಯವಾದ ಹೇಳಿದರು– ಪ್ರಜಾವಾಣಿ ಚಿತ್ರ
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ವಿವಿಧ ನೆರವು ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆ್ಯಸಿಡ್‌ ದಾಳಿ ಸಂತ್ರಸ್ತೆಯರು ಮತ್ತು ಅವರ ಕುಟುಂಬದವರು ನಮಸ್ಕರಿಸಿ, ಧನ್ಯವಾದ ಹೇಳಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ತಲಾ ₹ 5 ಲಕ್ಷ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.‌

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಉದ್ಘಾಟನೆ ಮತ್ತು ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಪರಿಷ್ಕೃತ ದರದ ಪಿಂಚಣಿ ಆದೇಶ ವಿತರಿಸಿದ ಬಳಿಕ ಅವರು ಮಾತನಾಡಿದರು.

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿ ಮೊತ್ತವನ್ನು ₹3,000 ದಿಂದ ₹10,000ಕ್ಕೆ ಹೆಚ್ಚಿಸಲಾಗಿದೆ. ಸಮಾರಂಭದಲ್ಲಿ ಕೆಲವು ಸಂತ್ರಸ್ತರಿಗೆ ಮುಖ್ಯಮಂತ್ರಿ ಪಿಂಚಣಿ ಆದೇಶ ವಿತರಿಸಿದರು. ಆಗ ಸಂತ್ರಸ್ತೆಯರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಬಳಿ ಹೇಳಿಕೊಂಡರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಘೋಷಣೆ ಮಾಡಿದರು.

ADVERTISEMENT

‘ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದ ಎಲ್ಲ ಮಹಿಳೆಯರಿಗೂ ಸರ್ಕಾರದಿಂದ ನಿವೇಶನ ಮಂಜೂರು ಮಾಡಿ, ಮನೆಯನ್ನೂ ನಿರ್ಮಿಸಿ ಕೊಡಲಾಗುವುದು. ಸ್ವಯಂ ಉದ್ಯೋಗ ಯೋಜನೆಯಡಿ ತಲಾ ₹ 5 ಲಕ್ಷ ನೆರವು ನೀಡಲಾಗುವುದು. ಶನಿವಾರವೇ ಈ ಸಂಬಂಧ ಆದೇಶ ಹೊರಡಿಸಲಾಗುವುದು’ ಎಂದರು.

‘ರಕ್ಷಿಸಬೇಕಾದ ಪುರುಷರೇ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಅವರು ಜೀವನಪರ್ಯಂತ ನರಳುವಂತೆ ಮಾಡಿದ್ದಾರೆ. ಇಂತಹ ಕೃತ್ಯಗಳು ಪುರುಷರು ತಲೆ‌ತಗ್ಗಿಸುವಂತೆ ಮಾಡಿವೆ. ನೋವು ತುಂಬಿಕೊಂಡು ಜೀವನ ನಡೆಸುವ ಸಂತ್ರಸ್ತೆಯರ ಧೈರ್ಯವನ್ನು ಶ್ಲಾಘಿಸಬೇಕಿದೆ. ಈಗ ಸರ್ಕಾರ ಅವರ ನೆರವಿಗೆ ಬರುತ್ತಿದೆ’ ಎಂದರು.

ಗದ್ಗದಿತರಾದಅಶೋಕ

ಮುಖ್ಯಮಂತ್ರಿ ಮಾತನಾಡಿದ ಬಳಿಕ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.‌ ಅಶೋಕ, ‘ಸರಿಯಾದ ಉದ್ಯೋಗವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟವಾಗಿದೆ ಎಂದು ಸಂತ್ರಸ್ತೆಯರು ನನ್ನ ಬಳಿ ಹೇಳಿಕೊಂಡಿದ್ದರು. ಅವರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುವಂತೆ ನಾನು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೆ. ಅವರು ವಸತಿ ಸೌಕರ್ಯ ಮತ್ತು ಸ್ವಯಂ ಉದ್ಯೋಗ ಎರಡಕ್ಕೂ ನೆರವು ಘೋಷಿಸಿ ತಾಯಿ ಹೃದಯ ಪ್ರದರ್ಶಿಸಿದ್ದಾರೆ’ ಎಂದು ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.