ADVERTISEMENT

ಬಿತ್ತನೆ ಬೀಜದಲ್ಲಿ ಲೋಪ | ಸೋಯಾಬಿನ್‌ ಕಂಪನಿಗಳ ವಿರುದ್ಧ ಕ್ರಮ -ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 15:33 IST
Last Updated 8 ಜೂನ್ 2020, 15:33 IST
   

ಹಾವೇರಿ: ‘ಸೋಯಾಬಿನ್‌ ಬಿತ್ತನೆ ಬೀಜ ಸರಿಯಾಗಿ ಮೊಳಕೆಯೊಡೆಯದಿರುವ ಬಗ್ಗೆ ಪರಿಶೀಲಿಸಲಾಗಿದೆ. ಬಿತ್ತನೆ ಬೀಜದಲ್ಲಿ ಲೋಪದೋಷಗಳಿದ್ದರೆ ಕಂಪನಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಪ್ರಕರಣ ದಾಖಲಿಸಲಾಗುವುದು. ರೈತರಿಗಾದ ನಷ್ಟವನ್ನು ಕಂಪನಿಗಳೇ ತುಂಬಿಕೊಡಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ನಗರದಲ್ಲಿ ಸೋಮವಾರ ಕೃಷಿ ತಜ್ಞರು ಹಾಗೂ ಕೃಷಿ ಅಧಿಕಾರಿಗಳ ತುರ್ತು ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಜೂನ್‌ 9ರಂದು ಕಂಪನಿಯ ಮಾಲೀಕರು ಹಾಗೂ ಪೂರೈಕೆದಾರರ ಸಭೆ ಕರೆಯಲಾಗಿದೆ. ಮೊಳಕೆ ಸಮಸ್ಯೆ ಬಗ್ಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು. ಬೀಜವನ್ನು ಪ್ರಮಾಣೀಕರಿಸಿದ ಹಾಗೂ ಪೂರೈಕೆದಾರರನ್ನು ಹೊಣೆಗಾರರನ್ನಾಗಿ ಮಾಡಿ ನಷ್ಟ ತುಂಬಿಸಿಕೊಡಲಾಗುವುದು ಎಂದು ತಿಳಿಸಿದರು.

ಹಿಂದಿನ ವರ್ಷ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಈ ವರ್ಷ ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಸಮಸ್ಯೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೋಯಾಬಿನ್ ಬಿತ್ತನೆ ಕ್ಷೇತ್ರ ಕಡಿಮೆ ಮಾಡಿ ಪರ್ಯಾಯ ಬೆಳೆಗೆ ರೈತರು ಮುಂದಾಗುವಂತೆ ಮನವಿ ಮಾಡಿಕೊಂಡರು.

ADVERTISEMENT

ಮಧ್ಯಪ್ರದೇಶ ಮತ್ತು ಆಂಧ್ರದಿಂದ 1,30,214 ಕ್ವಿಂಟಲ್ ಸೋಯಾಬಿನ್ ಬಿತ್ತನೆ ಬೀಜವನ್ನು ಸರಬರಾಜು ಮಾಡಲಾಗಿದೆ. ಈ ಪೈಕಿ 1,02,745 ಕ್ವಿಂಟಲ್ ಬೀಜವನ್ನು ವಿತರಣೆ ಮಾಡಲಾಗಿದೆ. ಮೊಳಕೆ ಸಮಸ್ಯೆ ಕಾರಣ 2,498 ರೈತರು ಮರಳಿ ಬೀಜವನ್ನು ನೀಡಿದ್ದಾರೆ. ರಾಜ್ಯದ ಸೋಯಾಬಿನ್ ಬಿತ್ತನೆ ಮಾಡಿದ ನಾಲ್ಕು ಜಿಲ್ಲೆಗಳ 9695 ರೈತರು ಬಿತ್ತನೆ ಮಾಡಿದ 8592 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.