ADVERTISEMENT

ಅನುಮತಿ ರಹಿತ CDR ಪಡೆಯುವ ಕ್ರಮ; ಪೊಲೀಸ್‌ ರಾಜ್ಯವಾದೀತು: ಹೈಕೋರ್ಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:34 IST
Last Updated 30 ಮೇ 2025, 15:34 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನಾನು ಪೊಲೀಸ್‌ ಅಧಿಕಾರಿಯಾಗಿದ್ದೇನೆ ಎಂಬ ಅಧಿಕಾರದ ಏಕೈಕ ಗತ್ತಿನಲ್ಲಿ, ಯಾವುದೇ ಪೊಲೀಸ್ ಅಧಿಕಾರಿ, ಯಾವುದೇ ವ್ಯಕ್ತಿಯ ಮೊಬೈಲ್ ಫೋನ್‌ನ ಸಿಡಿಆರ್ (ಕರೆ ವಿವರ ದಾಖಲೆ) ಅನ್ನು, ಕಾನೂನುಬದ್ಧ ತನಿಖಾ ಅಗತ್ಯದ ಅನುಮತಿ ಇಲ್ಲದೆ ಪಡೆಯಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ‘ಪೊಲೀಸರು ತಮ್ಮ ಇಚ್ಛೆಗೆ ಅನುಗುಣವಾಗಿ ಸಿಡಿಆರ್‌ ಪಡೆಯುವ ಅಧಿಕಾರ ಚಲಾಯಿಸುತ್ತಾ ಹೋದರೆ ಅದು ಪೊಲೀಸ್ ರಾಜ್ಯವಾಗುತ್ತದೆ’ ಎಂದು ಎಚ್ಚರಿಸಿದೆ.

ಮಹಿಳೆಯೊಬ್ಬರ ಸಿಡಿಆರ್ ಅನ್ನು ಅಕ್ರಮವಾಗಿ ಪಡೆದ ಆರೋಪ ಎದುರಿಸುತ್ತಿರುವ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಎಂ.ವಿ.ವಿದ್ಯಾ (37), ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿರುವ ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರು ಈ ಕುರಿತಂತೆ ಆದೇಶಿಸಿದ್ದಾರೆ.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಸತ್ಯನಾರಾಯಣ್ ಚಾಲ್ಕೆ, ‘ವಿದ್ಯಾ ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ, ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 197 (ಸಾರ್ವಜನಿಕ ಸೇವಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ತಡೆಯುವ) ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ ಕಲಂ 170ರ (ಸಾರ್ವಜನಿಕ ನೌಕರನ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮತ್ತು ವಿಚಾರಣೆಗೆ ಒಳಪಡಿಸಲು ಅಗತ್ಯವಿರುವ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ) ಅಡಿಯಲ್ಲಿ, ಅನುಮತಿಯ ಆದೇಶವಿಲ್ಲದೆ ಸಿಡಿಆರ್‌ ಕೋರಿದ್ದಾರೆ’ ಎಂದು ನ್ಯಾಯಪೀಠಕ್ಕೆ ಮನದಟ್ಟು ಮಾಡಲು  ಪ್ರಯತ್ನಿಸಿದರು.

ADVERTISEMENT

ಆದರೆ, ಇದನ್ನು ಒಪ್ಪದ ನ್ಯಾಯಪೀಠ, ‘ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಕನ್ನಡಿಗ ದಿವಂಗತ ಪುಟ್ಟಸ್ವಾಮಿ ಪ್ರಕರಣದಲ್ಲಿ ಸ್ಪಷ್ಟಪಡಿಸಿರುವಂತೆ ಯಾವುದೇ ವ್ಯಕ್ತಿಯ ಸಿಡಿಆರ್ ದಾಖಲೆಗಳು ಗೋಪ್ಯತೆಯ ಹಕ್ಕಿನಿಂದ ನಿಯಂತ್ರಿಸಲಾಗುವ ವೈಯಕ್ತಿಕ ಮತ್ತು ಖಾಸಗಿ ವಿವರಗಳಾಗಿವೆ. ಹೀಗಾಗಿ, ನಿರ್ದಿಷ್ಟ ವ್ಯಕ್ತಿಯ ಸಿಡಿಆರ್ ಪಡೆಯುವ ಅಧಿಕಾರವನ್ನು ತನಿಖಾ ಅಧಿಕಾರಿ ಮಾತ್ರ ಚಲಾಯಿಸಬೇಕಾಗುತ್ತದೆ’ ಎಂಬ ಅಂಶವನ್ನು ಉಲ್ಲೇಖಿಸಿತು.

‘ಭಾರತೀಯ ದಂಡ ಸಂಹಿತೆ–1860ರ ಕಲಂ 354(ಡಿ) 409, 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 66(ಡಿ) ಮತ್ತು 66(ಇ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.