ADVERTISEMENT

ಡಿಸಿಸಿ‌ ಬ್ಯಾಂಕ್‌ಗಳ ವಿಲೀನದ ಬಗ್ಗೆ ಕೇಂದ್ರದ ನಿರ್ದೇಶನದಂತೆ ಕ್ರಮ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 18:35 IST
Last Updated 29 ಮಾರ್ಚ್ 2022, 18:35 IST
ಸೋಮಶೇಖರ್‌
ಸೋಮಶೇಖರ್‌   

ಬೆಂಗಳೂರು: ‘ಕೇರಳ, ಗುಜರಾತ್‌ ಮತ್ತು ಛತ್ತೀಸಗಡ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ಗಳ ವಿಲೀನ ‌ಕುರಿತು ಅಧಿಕಾರಿಗಳ ಜೊತೆ ಈಗಾಗಲೇ ಸಭೆ ನಡೆಸಲಾಗಿದೆ. ಈ ಬಗ್ಗೆ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನು ಆ ರಾಜ್ಯಗಳಿಗೆ ಕಳುಹಿಸಿ, ಕೇಂದ್ರ ಸರ್ಕಾರಕ್ಕೆ ವರದಿ ರವಾನಿಸಲಾಗುವುದು. ಕೇಂದ್ರದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿರುವ ಯಾವುದೇ ಡಿಸಿಸಿ ಬ್ಯಾಂಕ್‌ ನಕಲಿ ಸಾಲ ನೀಡಿದ ಪ್ರಕರಣಗಳು ಕಂಡುಬಂದಿಲ್ಲ’ ಎಂದರು.

‘ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಸ್ವ ಸ್ವಹಾಯ ಸಂಘಗಳ ಹೆಸರಿನಲ್ಲಿ ನಕಲಿ ಸಾಲ ನೀಡಲಾಗುತ್ತಿದೆ. ಅರ್ಹರಿಗೆ ಸಾಲ ನೀಡುತ್ತಿಲ್ಲ’ ಎಂದು ನಾರಾಯಣಸ್ವಾಮಿ ಆರೋಪಿಸಿದಾಗ ಉತ್ತರಿಸಿದ ಸಚಿವರು, ‘ಈ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇಲ್ಲಿ 2016ರಿಂದ ಈವರೆಗೂ ₹ 1,281 ಕೋಟಿ ಸಾಲ ನೀಡಲಾಗಿದೆ. ಕೃಷಿಯೇತರರಿಗೂ ಸಾಲ ನೀಡಲಾಗಿದೆ. ಸುಸ್ತಿಯಾಗಿರುವ ಸಾಲ ವಸೂಲಿಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಈ ಬ್ಯಾಂಕಿನ ವ್ಯವಹಾರಗಳ ತನಿಖೆ ನಡೆಸಲಾಗುತ್ತಿದೆ. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ. ನಕಲಿ ಸಾಲ ನೀಡಿದ ನಿರ್ದಿಷ್ಟ ಪ್ರಕರಣಗಳಿದ್ದರೆ ಅದನ್ನೂ ತನಿಖೆ ಮಾಡಿಸಲು ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.