ADVERTISEMENT

ಟೆಂಡರ್‌ನಲ್ಲಿ ಅಕ್ರಮದ ಆರೋಪ: ತನಿಖೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:11 IST
Last Updated 19 ಜನವರಿ 2021, 15:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಕೈಗೊಂಡಿರುವ ₹ 881.95 ಕೋಟಿ ವೆಚ್ಚದ ಕಾಮಗಾರಿಗಳ ಟೆಂಡರ್‌ನಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಎಚ್‌.ಎಂ. ವೆಂಕಟೇಶ್ ಆರೋಪಿಸಿದ್ದಾರೆ.

ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳೊಂದಿಗೆ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ಅವರು, ಆರೋಪಗಳ ಕುರಿತು ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುವಂತೆ ಆಗ್ರಹಿಸಿದರು.

‘ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಾದ 25 ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಮೀಸಲಾದ ಒಂಭತ್ತು ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಅನುದಾನ ಒದಗಿಸದಿದ್ದರೂ ಟೆಂಡರ್‌ ಪ್ರಕ್ರಿಯೆ ನಡೆದಿದೆ. ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ಯಾಕೇಜ್‌ ಟೆಂಡರ್‌ ನಡೆಸಲಾಗಿದೆ’ ಎಂದು ದೂರಿದರು.

ADVERTISEMENT

ಅನುಮೋದನೆಯಾಗಿದ್ದ ಪಟ್ಟಿಯಲ್ಲಿದ್ದ ಕಾಮಗಾರಿಗಳ ವೆಚ್ಚ ಮತ್ತು ಟೆಂಡರ್‌ ನಡೆಸಲಾದ ವೆಚ್ಚದ ನಡುವೆ ಭಾರಿ ವ್ಯತ್ಯಾಸವಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಗುತ್ತಿಗೆದಾರರು ಹೈಕೋರ್ಟ್‌ಗೆ ನವೆಂಬರ್‌ 2ರಂದು ರಿಟ್‌ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆಗೂ ಮುನ್ನವೇ ಅರ್ಜಿ ಹಿಂಪಡೆದಿದ್ದಾರೆ. ಸಮಾಜ ಕಲ್ಯಾಣ ಸಚಿವರು, ಅಧಿಕಾರಿಗಳು ಭಾರಿ ಮೊತ್ತದ ಲಂಚ ಪಡೆದು ಟೆಂಡರ್‌ನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.

ಕಾಮಗಾರಿಗಳ ತಪಾಸಣೆಗೆ ಏಜೆನ್ಸಿ ನೇಮಕ ಮಾಡುವುದರಲ್ಲೂ ಅಕ್ರಮ ನಡೆದಿದೆ. ಈ ಪ್ರಕರಣದ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ವಿಚಾರಣೆ ನಡೆಸಬೇಕು. ಇಲ್ಲವೇ, ಸಿಬಿಐ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.