ADVERTISEMENT

ಅಪಘಾತ; ನಟಿ ಶಿಲ್ಪಾ ಶೆಟ್ಟಿ ಪತಿ ಹೆಸರಿನಲ್ಲಿದ್ದ ಕಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 19:25 IST
Last Updated 12 ಫೆಬ್ರುವರಿ 2021, 19:25 IST
ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ
ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ    

ಬೆಂಗಳೂರು: ಕಬ್ಬನ್ ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪಘಾತ ಪ್ರಕರಣ ಸಂಬಂಧ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೆಸರಿನಲ್ಲಿದ್ದ ಆಡಿ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಏರ್‌ಲೈನ್ ಹೊಟೇಲ್ ಬಳಿ ನಿಂತಿದ್ದ ಆಟೊ ಹಾಗೂ ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿಸಿದ್ದ ಚಾಲಕ, ಸ್ಥಳದಿಂದ ಪರಾರಿಯಾಗಿದ್ದ. ಆಟೊ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪಘಾತ ನಡೆದಿದ್ದ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕಾರಿನ ನೋಂದಣಿ ಫಲಕ ಸೆರೆಯಾಗಿತ್ತು. ತನಿಖೆ ಕೈಗೊಂಡಾಗ, ರಾಜ್ ಕುಂದ್ರಾ ಹೆಸರಿನಲ್ಲಿ ಕಾರು ನೋಂದಣಿ ಆಗಿದ್ದ ಮಾಹಿತಿ ಸಿಕ್ಕಿತ್ತು. ಶಿಲ್ಪಾ ಶೆಟ್ಟಿ ಅಥವಾ ರಾಜ್ ಕುಂದ್ರಾ ಅವರೇ ಅಪಘಾತ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.’

ADVERTISEMENT

‘ಇದರ ನಡುವೆಯೇ, ಕಾರಿನ ಚಾಲಕನಾದ ಬಿಟಿಎಂ 2ನೇ ಹಂತದ ನಿವಾಸಿ ಮೊಹಮ್ಮದ್ ಸದ್ದಾಂ ನಮ್ಮ ಕೈಗೆ ಸಿಕ್ಕಿಬಿದ್ದ. ತಾನೇ ಕಾರು ಚಲಾಯಿಸಿದ್ದಾಗಿ ತಪ್ಪೊಪ್ಪಿಕೊಂಡ’ ಎಂದೂ ಮೂಲಗಳು ತಿಳಿಸಿವೆ.

ಕಾರು ಮಾರಿದ್ದ ಕುಂದ್ರಾ: ‘ಮುಂಬೈನಲ್ಲಿ ವಾಸವಿರುವ ರಾಜ್‌ ಕುಂದ್ರಾ, 4 ತಿಂಗಳ ಹಿಂದೆಯೇ ತಮ್ಮ ಕಾರನ್ನು ಸ್ಥಳೀಯ ಡೀಲರ್ ಮೂಲಕ ಬೆಂಗಳೂರಿಗೆ ವ್ಯಕ್ತಿಗೆ ಮಾರಾಟ ಮಾಡಿದ್ದರು. ಆದರೆ, ಇದುವರೆಗೂ ದಾಖಲಾತಿ ವರ್ಗಾವಣೆ ಆಗಿಲ್ಲ ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

‘ಖರೀದಿ ಮಾಡಿದ್ದ ಕಾರನ್ನು ಮೊಹಮ್ಮದ್ ಸದ್ದಾಂ ಚಲಾಯಿಸುತ್ತಿದ್ದ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಈ ದೃಶ್ಯ ಸೆರೆಯಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.