ADVERTISEMENT

ರನ್ಯಾ ಪ್ರಕರಣದಲ್ಲಿ ಸಚಿವರ ಕೈ ಶಂಕೆ | ಕಾಂಗ್ರೆಸ್ ಸರ್ಕಾರ ಕಳ್ಳ ಸರ್ಕಾರ: ಅಶೋಕ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 11:16 IST
Last Updated 10 ಮಾರ್ಚ್ 2025, 11:16 IST
ಆರ್‌. ಅಶೋಕ
ಆರ್‌. ಅಶೋಕ   

ಬೆಂಗಳೂರು: ನಟಿ ರನ್ಯಾ ರಾವ್‌ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಸಚಿವರುಗಳ ಪಾತ್ರದ ಬಗ್ಗೆ ಶಂಕೆ ಇರುವ ಹಿನ್ನೆಲೆ ಸಿಬಿಐ ತನಿಖೆ ಆರಂಭಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ‘ಕಾಂಗ್ರೆಸ್‌ ಸರ್ಕಾರ ಕಳ್ಳ ಸರ್ಕಾರ’ ಎಂದು ಕುಟುಕಿದ್ದಾರೆ. 

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ‘ಪ್ರಜಾವಾಣಿ’ ವರದಿಯನ್ನು ಹಂಚಿಕೊಂಡಿರುವ ಅವರು, ‘ಭ್ರಷ್ಟಾಚಾರ, ಕಮಿಷನ್ ದಂಧೆಯನ್ನೇ ಫುಲ್ ಟೈಂ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಈಗ ಇಬ್ಬರು ಸಚಿವ ಮಹಾಶಯರು ಚಿನ್ನ ಕಳ್ಳಸಾಗಣೆ ಜಾಲದೊಂದಿಗೆ ನಂಟು ಹೊಂದಿರುವ ವಾಸನೆ ಬಡಿಯುತ್ತಿದೆ. ಸ್ವಾಮಿ ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ 'ಆಲಿ ಬಾಬಾ 34 ಕಳ್ಳರ' ಸರ್ಕಾರ ನಡೆಸಿ ಕರ್ನಾಟಕವನ್ನ ಲೂಟಿ ಮಾಡುತ್ತೀರಿ? ನಿಮ್ಮ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಈಗಲಾದರೂ ರಾಜೀನಾಮೆ ಕೊಟ್ಟು ನಿರ್ಗಮಿಸಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಲವು ದಿನಗಳಿಂದ ರನ್ಯಾ ರಾವ್‌ ಅವರ ವಿದೇಶ ಪ್ರವಾಸದ ಮೇಲೆ ನಿಗಾ ಇರಿಸಿದ್ದ ಡಿಆರ್‌ಐ ಅಧಿಕಾರಿಗಳು, ಮಾರ್ಚ್‌ 3ರಂದು ದುಬೈನಿಂದ ಮರಳುತ್ತಿದ್ದಂತೆಯೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ತಪಾಸಣೆಗೆ ಕರೆದೊಯ್ಯಲು ತನಿಖಾ ತಂಡ ಮುಂದಾಗುತ್ತಿದ್ದಂತೆ ಆರೋಪಿಯು ರಾಜ್ಯದ ಸಚಿವರೊಬ್ಬರಿಗೆ ಮೊಬೈಲ್‌ ಮೂಲಕ ಕರೆಮಾಡಲು ಯತ್ನಿಸಿದ್ದರು ಎಂದು ಮೂಲಗಳು ಹೇಳಿವೆ.

ADVERTISEMENT

‘ಬಂಧನದ ಸುಳಿವು ಪಡೆದ ರನ್ಯಾ ಸಚಿವರೊಬ್ಬರ ಮೊಬೈಲ್‌ ಸಂಖ್ಯೆಯನ್ನು ಡಯಲ್‌ ಮಾಡಲು ಯತ್ನಿಸಿದ್ದರು. ತಕ್ಷಣ ಮೊಬೈಲ್‌ ಕಿತ್ತುಕೊಂಡಿದ್ದ ಡಿಆರ್‌ಐ ಅಧಿಕಾರಿಗಳು, ಅದನ್ನು ಜಪ್ತಿ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.