ADVERTISEMENT

ಏರೋ ಇಂಡಿಯಾ 2023: ಅನಧಿಕೃತ ಡ್ರೋನ್‌ಗಳನ್ನು ನಿಸ್ತೇಜಗೊಳಿಸುವ ‘ಚಾಲೆಂಜರ್’

ಆ್ಯಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–3, ಚಾಲೆಂಜರ್–6 ತಂತ್ರಜ್ಞಾನ ಅಭಿವೃದ್ಧಿ

ಖಲೀಲಅಹ್ಮದ ಶೇಖ
Published 16 ಫೆಬ್ರುವರಿ 2023, 20:22 IST
Last Updated 16 ಫೆಬ್ರುವರಿ 2023, 20:22 IST
ಆಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–6 ಡ್ರೋನ್ ಜಾಮರ್‌
ಆಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–6 ಡ್ರೋನ್ ಜಾಮರ್‌   

ಬೆಂಗಳೂರು: ರಕ್ಷಣಾ ಇಲಾಖೆಯ ಸುತ್ತಮುತ್ತಲಿನ 2 ಕಿ.ಮೀ. ಪರಿಧಿಯಲ್ಲಿ ಹಾರಾಡುವ ಅನಧಿಕೃತ ಡ್ರೋನ್‌ ಹೊಡೆದುರುಳಿಸುವ ಉದ್ದೇಶದಿಂದ ‘ಆ್ಯಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–3 ಮತ್ತು ಚಾಲೆಂಜರ್‌–6’ ಎಂಬ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

‘ಚೆನ್ನೈನ ಹಿಲ್ಡ್‌ ಡಿಫೆನ್ಸ್‌ ಆ್ಯಂಡ್‌ ಏರೋಸ್ಪೇಸ್‌ ಎಂಬ ಖಾಸಗಿ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆ ಯುತ್ತಿರುವ ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ಈ ಡ್ರೋನ್‌ ಜಾಮರ್‌ ನೋಡಬಹುದು.

‘ಭದ್ರತಾ ದೃಷ್ಟಿಯಿಂದ, ವಿಪತ್ತು ಪರಿಹಾರ, ಕಾನೂನು ಮತ್ತು ಸುವ್ಯವಸ್ಥೆಯ ಜಾರಿ, ವಿಮಾನ ನಿಲ್ದಾಣ ಮತ್ತು ವಿಐಪಿ ಭದ್ರತೆ ಸೇರಿದಂತೆ ಹಲವು ಉದ್ದೇಶಗಳಿಗೆ ಈ ಡ್ರೋನ್‌ ಜಾಮರ್‌ ವ್ಯವಸ್ಥೆ ಸಹಕಾರಿಯಾಗಲಿದೆ. ಇದನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ’ ಎಂದು ಸಂಸ್ಥೆಯ ಮಾರಾಟ ವ್ಯವಸ್ಥಾಪಕ ಕಾರ್ತಿಕೇಯನ್‌ ತಿಳಿಸಿದರು.

ADVERTISEMENT

5.8 ಕೆ.ಜಿ. ತೂಕದ ಆಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–3 ಜಾಮರ್‌ 30 ನಿಮಿಷ ಚಾರ್ಜ್‌ ಮಾಡಿದರೆ 8 ಗಂಟೆವರೆಗೂ ಕೆಲಸ ಮಾಡುತ್ತದೆ. ರಕ್ಷಣಾ ಇಲಾಖೆಯ ಪರಧಿಯ 2 ಕಿ.ಮೀ. ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾರಾಡುವ ಶತ್ರುಗಳ ಡ್ರೋನ್‌ಗಳನ್ನು ಪತ್ತೆಹಚ್ಚಿ ಮಾಹಿತಿ ನೀಡುತ್ತದೆ. 500 ಮೀಟರ್‌ ದೂರದಿಂದಲೇ ಅದನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದರ ಬೆಲೆ ₹20 ಲಕ್ಷ.

6.2 ಕೆ.ಜಿ. ತೂಕದ ಆ್ಯಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–6 ಜಾಮರ್‌ 11 ಬೇರೆ ಬೇರೆ ಬಗೆಯ ತರಂಗಾಂತರಗಳ ಡ್ರೋನ್‌ಗಳನ್ನು ನಿಸ್ತೇಜಗೊಳಿಸುತ್ತದೆ. ಅದರ ಕ್ಯಾಮೆರಾ ಕಾರ್ಯನಿರ್ವಹಿಸದಂತೆ ತಡೆಯುತ್ತದೆ. ಸಂದೇಶ ರವಾನಿಸದಂತೆ ಮಾಡಿ, ಜಿಪಿಎಸ್‌ ಸಂಪರ್ಕವನ್ನು ಕಡಿತಗೊಳಿಸುತ್ತದೆ. 4 ಗಂಟೆ ಜಾರ್ಜ್‌ ಮಾಡಿದರೆ 1.5 ಗಂಟೆ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ ₹25 ಲಕ್ಷ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.