
ಬೆಂಗಳೂರು: ‘ಬೆಂಗಳೂರು ಅಲ್ಲದೇ ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರದಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಅಭಿವೃದ್ಧಿಪಡಿಸಿರುವ ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್‌ಗೆ ಅವರು ಚಾಲನೆ ನೀಡಿ ಮಾತನಾಡಿದರು.
ಕಾಲಿನ್ಸ್ ಏರೋಸ್ಪೇಸ್ ರಾಜ್ಯದಲ್ಲಿ 25 ದಶಲಕ್ಷ ಡಾಲರ್ ಹೂಡಿಕೆ ಮಾಡುತ್ತಿದೆ. ಈ ನೂತನ ಘಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಧುನಿಕ ತಯಾರಿಕೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೌಶಲಪೂರ್ಣ ಉದ್ಯೋಗ ಸೃಷ್ಟಿಯಾಗಲಿದೆ. ಭಾರತದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕದ ಕೊಡುಗೆ ಶೇ 65 ರಷ್ಟಿದೆ ಎಂದು ಹೇಳಿದರು.
ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ತೊಡಗಿಸಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ರಾಜ್ಯದಲ್ಲಿವೆ. ಮಹೀಂದ್ರ ಏರೋಸ್ಪೇಸ್, ರಂಗ್‌ಸನ್ಸ್ ರೀತಿಯ ವೈಮಾಂತರಿಕ್ಷ ಕಂಪನಿಗಳು ರಾಜ್ಯದಲ್ಲಿ ಅಪಾರ ಮೊತ್ತದ ಹೂಡಿಕೆ ಮಾಡಿದ್ದು, ಈ ವಲಯದಲ್ಲಿ 48 ಒಡಂಬಡಿಕೆಗಳಾಗಿವೆ. ರಂಗ್‌ಸನ್ಸ್ ಕಂಪನಿಯು ಬೋಯಿಂಗ್ ಕಂಪನಿ ಜತೆ ಸಹಭಾಗಿತ್ವ ಹೊಂದಿದ್ದು, ₹2,915 ಕೋಟಿ ಹೂಡಿಕೆ ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ₹45,000 ಕೋಟಿ ಹೂಡಿಕೆ ಆಕರ್ಷಿಸಿ, 60 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ ಎಂದು ಅವರು ವಿವರಿಸಿದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ , ಭಾರತದ ವೈಮಾನಿಕ ಮಾರುಕಟ್ಟೆಯು 2032 ರ ವೇಳೆಗೆ ಜಗತ್ತಿನಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಇಲ್ಲಿ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲ್ ಯೋಜನೆಯಡಿ ಈಗ ವರ್ಷಕ್ಕೆ 1.2 ಶತಕೋಟಿ ಡಾಲರ್ ವಹಿವಾಟು ನಡೆಯುತ್ತಿದೆ. ಮುಂದಿನ ಏಳು ವರ್ಷಗಳಲ್ಲಿ ಅದು 4.6 ಶತಕೋಟಿ ಡಾಲರ್‌ಗೆ ಬೆಳೆಯಲಿದೆ. ಇದರಲ್ಲಿ ಕಾಲಿನ್ಸ್ ಏರೋಸ್ಪೇಸ್ ತರಹದ ಕಂಪನಿಗಳ ಕೊಡುಗೆ ಗಮನಾರ್ಹವಾಗಿರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್ ಹಾಗೂ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ಹಿರಿಯ ಉಪಾಧ್ಯಕ್ಷ ರಾಯ್ ಗಲಿಕನ್ಸ್ ಇದ್ದರು.
Cಏರೋಸ್ಪೇಸ್ ಪರಿಣತರ ಕರ್ಮಭೂಮಿ–ಡಿಕೆಶಿ
‘ಏರೋಸ್ಪೇಸ್ ತಂತ್ರಜ್ಞಾನದ ಹಲವಾರು ಪರಿಣಿತರು ಬೆಂಗಳೂರನ್ನೇ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದು ಜ್ಞಾನ ತಂತ್ರಜ್ಞಾನದ ನಗರವಾಗಿ ನಮ್ಮ ರಾಜಧಾನಿಯು ಗುರುತಿಸಿಕೊಂಡಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ‘ನಮ್ಮ ಸರ್ಕಾರವೂ ಉದ್ಯೋಗದಾತರಿಗೆ ಸದಾ ಬೆಂಬಲ ನೀಡಲಿದೆ. ಸರ್ಕಾರದ ಬಾಗಿಲು ಸದಾ ತೆರೆದಿರುತ್ತದೆ. ಕರ್ನಾಟಕದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಗಮನ ಹರಿಸಬೇಕು’ ಎಂದು ಅವರು ಉದ್ಯಮಿಗಳಿಗೆ ಸಲಹೆ ನೀಡಿದರು. ‘ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜ್ಯದಿಂದ ಹೊರಹೊಮ್ಮುತ್ತಿದ್ದಾರೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ’ ಎಂದು ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.