ADVERTISEMENT

ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆ ಪದ್ಧತಿ ಸಲ್ಲ; ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:50 IST
Last Updated 18 ಜೂನ್ 2022, 20:50 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ಸೇವಾ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಕೊಟ್ಟು ನಾಲ್ಕು ವರ್ಷದಲ್ಲಿ ನಿವೃತ್ತಿಗೊಳಿಸಿದರೆ ಯಾವ ಸೈನಿಕ ಕೂಡ ಪೂರ್ಣಪ್ರಮಾಣದಲ್ಲಿ ತರಬೇತಿ ಪಡೆದಂತೆ ಆಗುವುದಿಲ್ಲ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆ, ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ. ರಕ್ಷಣಾ ಇಲಾಖೆ ಬಗ್ಗೆ ತಿಳಿಯಲು ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ವರ್ಷ ಬೇಕು. ನಾಲ್ಕೇ ವರ್ಷಕ್ಕೆ ಮನೆಗೆ ಕಳುಹಿಸಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಸೇನೆ ಸೇರಲು ಇಚ್ಛಿಸುವವರು ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡುತ್ತಾರೆ. ಅಂತಹವರನ್ನೂ ನೀವು ಗುತ್ತಿಗೆ ನೌಕರರಂತೆ ನೋಡುವುದು ಎಷ್ಟು ಸರಿ? ತರಬೇತಿ ಕೇಂದ್ರದಲ್ಲಿ ಹಣ ಕೊಟ್ಟು ಸ್ವಲ್ಪ ತರಬೇತಿ ಪಡೆದಿರುತ್ತಾರೆ. ನಾಲ್ಕು ವರ್ಷದಲ್ಲಿ ಅಷ್ಟು ಹಣ ವಾಪಸ್ ಬರುವುದಿಲ್ಲಲ.‌‌‌ ಇದನ್ನು ದೇಶದ ಯುವಜನರು ಒಪ್ಪುವುದಿಲ್ಲ’ ಎಂದರು.

ADVERTISEMENT

‘ಅಗ್ನಿಪಥ್ ಹೆಸರಿನಲ್ಲಿ ಕೇಂದ್ರ ಸರ್ಕಾರವು ರಾಜಕಾರಣ ಮಾಡುತ್ತಿದ್ದು, ಯುವಜನರನ್ನು ಪ್ರಚೋದಿಸುತ್ತಿದೆ. ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದು, ಭಾನುವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್‌ನಿಂದ ಸತ್ಯಾಗ್ರಹ ನಡೆಸಲಾಗುವುದು’ ಎಂದರು.

ಭರ್ತಿಯಾಗದ ಹುದ್ದೆಗಳು: ರಕ್ಷಣಾ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದು, ಕೇಂದ್ರ ಸರ್ಕಾರವು ಈಚೆಗೆ ಯಾವ ಹುದ್ದೆಗಳನ್ನು ಭರ್ತಿ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.